Flash News:
ಅರಿವು ಮರೆತವರೆಲ್ಲಾ ...!: ಮಲ್ಲಮ್ಮ ಯಾಟಗಲ್ ಅವರ ಕವಿತೆ

ಅರಿವು ಮರೆತವರೆಲ್ಲಾ ...!: ಮಲ್ಲಮ್ಮ ಯಾಟಗಲ್ ಅವರ ಕವಿತೆ

Updated : 11.09.2022

ಅರಿವಿಲ್ಲದ ಆಲಯದಲ್ಲಿ ಮರೆವಿನ
ಜಂಗಮ ಫಕೀರನ ಜೋಳಿಗೆಗಳು
ಜೊಳ್ಳು ತುಂಬಿದ ಗೋಣಿಚೀಲದಂತೆ
ಶೀಲವನ್ನು ಹರಿದುಕೊಂಡು
ನಡುದಾರಿಯಲ್ಲಿ ನಡೆಯುವಾಗ
ಎಡವಿದವರೆಷ್ಟೋ..!

ನಾಮವ ಕಂಡರೆ ಕುಣಿದಾಡುವ
ಟೋಪಿಯ ಕಂಡರೆ ಕೊಲ್ಲನೆಂಬುವ
ಹಾಕುವ ನಾಮದಲ್ಲಿ,ಉಡುವ ಹಿಜಾಬಿನ ಕಲಹದಲ್ಲಿ
ಧರ್ಮಮರ್ಮವನಿಕ್ಕಿ ಕರ್ಮನರರನಿಕ್ಕಿ
ನಡು ರಸ್ತೆಯಲ್ಲಿ ರಕ್ತ ಚೆಲ್ಲಿ ಒದ್ದಾಡುವಾಗ
ನಿಮ್ಮ ಧರ್ಮವನೆತ್ತ ಬಲ್ಲರೋ...!

ಲೋಕದಲ್ಲಿ ಕುಚೇಷ್ಟಿಗಳು ಕ್ರೋಧ ಮಾಡುವಾಗ
ಹಸಿದವರ ಒಡಲು ಹೊತ್ತಿಸಿ
ಬಸಿದ ಬೆವರು ಬತ್ತಿಸಿ
ನಸಿಬಿಲ್ಲದ ಕಾಲಕ್ಕೆ ಕುಸಿದು ಬಿದ್ದವರನ್ನು
ನಭಕ್ಕೆತ್ತೆಸೆಯಬಲ್ಲರೋ...?

ಚಿಗುರುವ ಮೊಲೆಗೆ ಬಾಯೊಡ್ಡಿದಾಗ
ಹಾಲಿನ ನೊರೆಯೊಂದು ಉಚ್ಚೆ ಕುಡಿವ
ನೆಚ್ಚಿನ ಭಕ್ತರ ಅರಿಹು ಮರೆತು ಕುರುಹುಗಾಗಿ
ಒದ್ದಾಡುವಾಗ
ಲೋಕದ ಅರಿವಿಂಗೆ
ರಬಿಯಾ ನೀಡಿದ
ತತ್ವಂಗಳ ಅರಿತವರೇಷ್ಟು..!

ಧರ್ಮಂಧರ ಎದೆಯಲ್ಲಿ ಗುಂಡಿಗೆಗಳು ಗುದ್ದಾಡಿ
ತರ್ಕಿಸದೆ ಪರಿಕಸದೆ ಈ ಘೋರಪಾಪಿಗಳ
ತನು ಮನದೊಳಗೆ ವಿಷಕಾರುವ
ಕಾರ್ಖಾನೆ ಉಗುಳಿದಷ್ಟು ಮಾಲಿನ್ಯ
ಸತ್ಯವಂತರ ಸಾಕ್ಷಿಯಾಗಿ
ಮಾನವ ಧರ್ಮದ ಸಾರ ಅರಿತವರಿಲ್ಲ.....!!?

© Copyright 2022, All Rights Reserved Kannada One News