ಅಪರಿಮಿತ ಕುತಂತ್ರಿಯ ಪೇಚಾಟ: ಚಂದ್ರಪ್ರಭ ಕಠಾರಿ ಅವರ ಅಂಕಣ

Related Articles

ಕುಸುಮಬಾಲೆ ‘ಅವರವರಗ ತಿಳಿದ ರೀತೀಲೀ...’: ಡಾ.ರವಿಕುಮಾರ್ ನೀಹ ಅವರ ಅಂಕಣ

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ನಾಲ್ಕು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಸಿಎಂ ಬಸವರಾಜ ಬೊಮ್ಮಾಯಿ ರಾಜೀನಾಮೆ..?: ಎಡಿಟರ್ ಸ್ಪೆಷಲ್

ನಂಬಲಾರದ ದು:ಸ್ವಪ್ನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬೇಟಿ ಬಚಾವೋ ಬಿಜೆಪಿಯಿಂದ..!: ಎಡಿಟರ್ ಸ್ಪೆಷಲ್

ಸಂಗೀತಿ ಸುತ್ತ-ಬುದ್ಧರ ಬೋಧನೆಗಳ ಸಾರ ಭಾಗ-2: ರಮಾಕಾಂತ ಪುರಾಣಿಕ ಅವರ 25ನೇ ಅಂಕಣ

ಮಾರಕ ಮತಾಂತರ ಕಾಯ್ದೆಗೆ ಅಸ್ತು!: ಎಡಿಟರ್ ಸ್ಪೆಷಲ್

ಯೋಗ, ಪ್ರಯೋಗ ಮತ್ತು ಬುದ್ಧ ಭಾಗ-ಮೂರು: ಫೀನಿಕ್ಸ್ ರವಿ ಅವರ ವಾರದ ಅಂಕಣ

ಕಾಲದ ತಲ್ಲಣಗಳು: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಧಮ್ ಇದ್ದು…ತಾಕತ್ತಿದ್ದು…ನಿದ್ದೆ ಹೊಡೆದ ಕುರ್ಚಿಗಳು; ಎಚ್ಚೆತ್ತ ಜನಗಳ ದೇಶ ಕಟ್ಟೊ ಜಾಥಾವು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಅಪರಿಮಿತ ಕುತಂತ್ರಿಯ ಪೇಚಾಟ: ಚಂದ್ರಪ್ರಭ ಕಠಾರಿ ಅವರ ಅಂಕಣ

Updated : 27.07.2022

ಸಬ್ ಕಾ ಸಾತ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ - ಜಪಿಸುತ್ತ, ಆಕಾಶದ ಚಂದ್ರ ನಡುರಾತ್ರಿಯಲ್ಲಿ ನೆತ್ತಿಗೇರುವ ಹೊತ್ತಿನವರೆಗೂ ದೇಶದ ಜನರ ಏಳ್ಗೆಯ ಬಗ್ಗೆ ಚಿಂತಿಸುತ್ತ, ಭರತಖಂಡದ ಸಾಮ್ರಾಟ ದಿನವೂ ಸುಸ್ತಾಗಿ ನಿದ್ದೆಗೆ ಜಾರುವನಷ್ಟೆ! ಆದರೆ, ಸೂರ್ಯ ಇನ್ನು ಬಾನಿನ ಕಿಟಕಿಯಲ್ಲಿ ಇಣುಕುವ ಮುಂಚೆಯೇ ಕೋಳಿನಿದ್ದೆ ಮಾಡಿದವನು ಹಾಸಿಗೆಯಿಂದೆದ್ದು ಮತ್ತೆ ದೇಶದ ಉದ್ದ, ಅಗಲದ ಬಗ್ಗೆ ಆಳವಾಗಿ ಚಿಂತಿಸತೊಡಗುವನು. ಹೀಗಿರುವಾಗ ಆ ದಿನ ಮುಂಜಾನೆಯಾದರೂ ಸಾಮ್ರಾಟ ತನ್ನ ಮಲಗುವ ಕೋಣೆಯಿಂದ ಹೊರ ಬಂದಿರಲಿಲ್ಲ.

ಬಾಗಿಲ ಬಳಿ ಕಾವಲು ಕಾಯುತ್ತಿದ್ದ ರಾಜಭಟರು ಈಗ ಬಂದಾನು ಆಗ ಬಂದಾನು ಎಂದು ಕಾಯುತ್ತಿದ್ದರೂ ಸಾಮ್ರಾಟ ಹೊರ ಬರುವ ಯಾವ ಸೂಚನೆಯೂ ಕಾಣಲಿಲ್ಲ. ಆಸ್ಥಾನ ಪಕ್ಷಿ, ಸಾಮ್ರಾಟನ ಮುದ್ದಿನ ನವಿಲು ಹಸಿವೆಯಿಂದ ಒಂದೇ ಸಮನೆ ಕೂಗುತ್ತಿತ್ತು. ಆದರೆ, ಸಾಮ್ರಾಟನ ಹೊರತು ಪಡಿಸಿ ಯಾರೂ ಅದಕ್ಕೆ ಕಾಳು ಉಣಿಸುವಂತಿರಲಿಲ್ಲ. ಅತ್ತ ಅರಮನೆಯ ಹೊರಗಡೆ ಸಾಮ್ರಾಟನ ದರ್ಶನಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತ ಭಜನೆ ಮಾಡುತ್ತಿದ್ದ ಭಕ್ತಗಣಗಳ ನಾಲಿಗೆಯ ಪಸೆ ಆರುತ್ತಿತ್ತು. ಇತ್ತ ದಿನಚರಿಯಂತೆ ಸಂಡಾಸಿನ ಮುಂದೆ ಬಕೆಟ್ಟಲ್ಲಿ ನೀರು ತುಂಬಿಕೊಂಡು ಸಾಮ್ರಾಟನಿಗಾಗಿ ಕಾಯುತ್ತಿದ್ದ ಬಕೆಟ್ ಗೋಸ್ವಾಮಿಗೆ ಬಹಿರ್ದೆಶೆಗೆ ನೈಸರ್ಗಿಕ ಕರೆಬಂದು, ತಾನು ಹೋದ ಹೊತ್ತಲ್ಲಿ ಸಾಮ್ರಾಟರು ಬಂದರೇನು ಗತಿಯೆಂದು ಹೊಟ್ಟೆ ಹಿಡಿದುಕೊಂಡು ಒದ್ದಾಡುತಲ್ಲಿದ್ದ.

ಬೆಳಗಿನ ಉಪಾಹಾರ ವೇಳೆ ಮೀರಿದರೂ ಸಾಮ್ರಾಟರು ತಮ್ಮ ಕೋಣೆಯಿಂದ ಹೊರಬಾರದಾಗ ಗಾಬರಿಯಾದ ಕಾವಲುಭಟರು, ಸಾಮ್ರಾಟನ ಚಡ್ಡಿದೋಸ್ತು ಮತ್ತು ಅರಮನೆಯ ಮಂತ್ರಿ - ಅಪರಿಮಿತ ಕುತಂತ್ರಿಗೆ ಸುದ್ಧಿ ಮುಟ್ಟಿಸಿದರು. ಅವನು ಆಶ್ಚರ್ಯಚಕಿತನಾದ. ಮನದ ಮೂಲೆಯಲ್ಲಿ ಸಾಮ್ರಾಟನ ಅಂತ್ಯ ಹೊಳೆದು ಸಿಂಹಾಸನದ ಕನಸು ಕ್ಷಣ ಮಾತ್ರದಲ್ಲಿ ಮಿಂಚಂತೆ ಕಂಡು ಮರೆಯಾಯಿತು. ತನ್ನ ಮನೋಇಂಗಿತವನ್ನು ಯಾರಾದರೂ ಗ್ರಹಿಸಿದರೆ ಗತಿ ಏನೆಂದು ಒಮ್ಮೆ ಸುತ್ತಲ್ಲಿದ್ದ ಜನರ ಮುಖಗಳನ್ನು ಗಮನಿಸಿದ. ಅವರ ಆತಂಕದ ಮುಖಗಳನ್ನು ನೋಡಿ ಸಮಾಧಾನವಾಯಿತು. ತನಗೆ ತಾನೇ ಹೇಳಿಕೊಂಡಂತೆ  “ ಸಾಮ್ರಾಟರು ದೇಶದ ಭಕ್ತಜನರ ಆಶೀರ್ವಾದದಿಂದ ಚಿರಂಜೀವಿಗಳಾದವರು. ಹಾಗಾಗಿ ಅವರ ಆರೋಗ್ಯದಲ್ಲಿ ಯಾವ ತೊಂದರೆ ಇರದು. ಸರಿ…ನಡೀರಿ. ನಾನೇ ಖುದ್ದಾಗಿ ಸಾಮ್ರಾಟರನ್ನು ಎಚ್ಚರಿಸುತ್ತೇನೆ ” ಎಂದು ತನ್ನ ದಢೂತಿ ದೇಹವನ್ನು ಹೊರಲಾರದೆ ಹೊತ್ತು ನಡೆದ.

ಸಾಮ್ರಾಟನ ಮಲಗುವ ಕೋಣೆಯತ್ತ ಬಂದು ನೋಡಿದರೆ ಅಪರಿಮಿತ ಕುತಂತ್ರಿಗೆ ಅಲ್ಲೊಂದು ವಿಚಿತ್ರ ಕಂಡಿತು. ಅಗುಳಿ ಹಾಕಿದ ಬಾಗಿಲ ಸಂದಿಯಿಂದ ನೆಲದ ಮೇಲೆ ನೀರು ಹರಿದು ಬರುತ್ತಿತ್ತು. ಬಚ್ಚಲಲ್ಲಿ ಕೊಳಾಯಿಯನ್ನು ಬಿಟ್ಟಂತೆ ಹರಿದು ಬರುತ್ತಿದ್ದ ನೀರನ್ನು ನೋಡಿ ಬೆರಗಾಗಿ ಗೊಂದಲಗೊಂಡ. ದೇಶದ್ರೋಹಿ ಜನಗಳು ದಂಗೆ ಎದ್ದ ದುಃಸ್ವಪ್ನ ಕಂಡು ಸಾಮ್ರಾಟರು ಹಾಸಿಗೆ ಒದ್ದೆ ಮಾಡಿಕೊಂಡರಾ? ಎನಿಸಿತು. ಆದರೆ, ಹರಿದು ಬರುತ್ತಿದ್ದ ನೀರಿಗೆ ಮೂತ್ರದಂಥ ಕೆಟ್ಟ ವಾಸನೆ ಇರಲಿಲ್ಲ.

 “ ಸ್ವಾಮಿಗಳೆ…ಸ್ವಾಮಿಗಳೆ…ಎದ್ದೇಳಿ…” ಎಂದು ಮೃದುವಾಗಿ ಬಾಗಿಲ ಬಡಿದ. ಸ್ವಲ್ವ ಹೊತ್ತು ಕೋಣೆಯೊಳಗಿಂದ ಏನೂ ಕೇಳದೆ ನೀರವತೆ ತುಂಬಿತ್ತು. ಮತ್ತೊಮ್ಮೆ ತುಸು ಜೋರಾಗಿ ಕೂಗಿದ. ಈಗ ಒಳಗಿಂದ ಬಿಕ್ಕಿಬಿಕ್ಕಿ ಅಳುವ ಸದ್ದು ಕೇಳತೊಡಗಿತು. ಇನ್ನು ಕಾಯುವುದರಲ್ಲಿ ಅರ್ಥವಿಲ್ಲವೆಂದು ಅಪರಿಮಿತ ಕುತಂತ್ರಿ ರಾಜಭಟರಿಗೆ ಬಾಗಿಲು ಒಡೆಯಲು ಹೇಳಿದ.

ಬಾಗಿಲು ತೆರೆದೊಡನೆ ಮಂಚದ ಮೇಲೆ ಸಾಮ್ರಾಟನಿದ್ದ ಸ್ಥಿತಿಯ ಕಂಡು ಅಪರಿಮಿತ ಕುತಂತ್ರಿ ದಿಗ್ಭ್ರಾಂತನಾದ. ಹಾಸಿಗೆ ಮೇಲೆ ಹಾಸಿದ್ದ ಹಾಸು, ದಿಂಬು ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕುಕ್ಕರುಗಾಲಲ್ಲಿ ಕೂತ ಸಾಮ್ರಾಟ, ತೊಡೆಗಳ ಮಧ್ಯೆ ಮುಖವಿರಿಸಿ ಒಂದೇ ಸಮನೆ ರೋಧಿಸುತ್ತಿದ್ದ. ಅವನ ಕಣ್ಣಿನಿಂದ ಧಾರಾಕಾರವಾಗಿ ಹರಿದು ಬರುತ್ತಿದ್ದ ನೀರು ಅವನ ಮೈಯನ್ನೆಲ್ಲ ತೋಯಿಸಿ, ಮಂಚದಿಂದ ಹರಿದು ಕೋಣೆಯ ತುಂಬೆಲ್ಲ ಹರಿದಾಡಿತ್ತು. ಆ ದೃಶ್ಯ ಕಂಡು ಅಪರಿಮಿತ ಕುತಂತ್ರಿ ಸೇರಿ, ವಿಷಯ ತಿಳಿದು ಧಾವಿಸಿ ಬಂದಿದ್ದ ಸಮಸ್ತ ಮನೆ ಮುರುಕ ಮಂತ್ರಿಗಳ ಎದೆ ಒಡೆದು ಹೋಯಿತು. ಎಲ್ಲರ ಕಣ್ಣಲ್ಲಿ ನೀರು ಬಳಬಳನೆ ಸುರಿಯತೊಡಗಿತು.

ದೇಶದ ಬಗ್ಗೆ, ಬಡಜನ ದೀನದಲಿತರ ಬಗ್ಗೆ ಚಿಂತಿಸುತ್ತ ಚಿಂತಿಸುತ್ತ ಸಾಮ್ರಾಟನ ಹೃದಯ ಹಿಂಡಿ ಅದು ಕಣ್ಣೀರ ಕೋಡಿಯಾಗಿದೆ ಎಂದು ಎಲ್ಲರೂ ತಿಳಿದು ಅವನ ಸಂಕಟಕ್ಕೆ ಮಮ್ಮುಲ ಮರುಗಿದರು.

“ ಸ್ವಾಮಿಗಳೆ…ಯಾಕಿಷ್ಟು ವೇದನೆ? ಕಷ್ಟಗಳೆಲ್ಲ ತಾತ್ಕಾಲಿಕ. ಅಡುಗೆ ಸಾಮಗ್ರಿ, ಇಂಧನ ಬೆಲೆ ಗಗನಕ್ಕೇರಿ ರಾಕೆಟ್ಟಿನಂತೆ ಅಂತರಿಕ್ಷ ಮುಟ್ಟಿರುವುದು ನಿಮ್ಮಂತೆ ನಮಗೂ ನೋವು ತಂದಿದೆ. ಆದರೆ ಖಜಾನೆಯಲ್ಲಿ ದುಗ್ಗಾಣಿ ಇಲ್ಲದಿರುವಾಗ ತಾವಾದರೂ ಏನು ಮಾಡಲು ಸಾಧ್ಯ? ”

“ ಸಾಮ್ರಾಟರೇ ಚಿಂತಿಸದಿರಿ. ದೊಡ್ಡಣ್ಣನ ಡಾಲರಿನ ಮುಂದೆ ನಮ್ಮ ವರಹದ ಬೆಲೆ ಈಗ ನೆಲಕಚ್ಚಿದೆ! ಹೌದು…ಮುಂದೆ ನಮಗೂ ಒಳ್ಳೇ ಕಾಲ ಬರುತ್ತೆ. ಆಗ ಹತ್ತು ಡಾಲರುಗಳು ನಮ್ಮ ಒಂದು ವರಹದ ಸಮಾನವಾಗುತ್ತೆ ”

“ ವ್ಯಾಪಾರಿಗಳ ಅಪಾರ ಸಾಲವನ್ನು ಮನ್ನಾ ಮಾಡಿದ್ದೇ ಈಗಿನ ದೇಶದ ದುಸ್ಥಿತಿಗೆ ಕಾರಣ. ಆದರೇನು ಮಾಡುವುದು? ಹಾಗೆ ಮಾಡದಿದ್ದರೆ ಜನರು ದಂಗೆ ಎದ್ದಾಗ ಮಟ್ಟ ಹಾಕಲು ಬೇಕಾಗುವ ಧನ ಸಹಾಯವನ್ನು ಅವರಲ್ಲದೆ ಯಾರಿಂದ ಪಡೆಯಲು ಸಾಧ್ಯ?”

ಹೀಗೆ ಮನೆ ಮುರುಕ ಮಂತ್ರಿಗಳು ತಮ್ಮ ತಲೆಗೆ ತೋಚಿದಂತೆ ಸಾಮ್ರಾಟನಿಗೆ ಸಮಾಧಾನ ಮಾಡಲು ಯತ್ನಿಸುತ್ತಿರುವಾಗ, ಅಪರಿಮಿತ ಕುತಂತ್ರಿಗೆ ಸಾಮ್ರಾಟನ ಸಂಕಟಕ್ಕೆ ಅಸಲೀ ಕಾರಣವೇನೆಂದು ಹೊಳೆಯಿತು.

“ ಸಾಮ್ರಾಟರೇ…ನೀವು ಕಣ್ಣೀರು ಹಾಕಬೇಡಿ. ಅದು ನಮ್ಮ ನಾಡಿಗೆ ಶುಭಸೂಚಕವಲ್ಲ. ಅದು ಅಲ್ಲದೆ ನಿಮ್ಮನ್ನೇ ನಂಬಿ ಬದುಕುತ್ತಿರುವ ದೇಶದ ಭಕ್ತಸ್ತೋಮದ ಕ್ಷೇಮಕ್ಕೆ ಒಳಿತಾಗದು. ನಿಮ್ಮ ಆಜ್ಞೆಯಂತೆ ಈ ದೇಶದ ಸಕಲ ಸಂಪತ್ತನ್ನು ದೋಚಿದ ಬನಿಯಾಗಳನ್ನು ನಾನೇ ಖುದ್ದಾಗಿ ಹೋಗಿ ಹಡಗನ್ನು ಹತ್ತಿಸಿ ಬಂದಿದ್ದೇನೆ. ಅವರೀಗಾಗಲೇ ಸೇಫಾಗಿ ವಿದೇಶವನ್ನು ಮುಟ್ಟಿರುತ್ತಾರೆ. ಆ ಬಗ್ಗೆ ನಿಮಗೆ ಲವಲೇಶವೂ ಸಂಶಯ ಬೇಡ ” ಎಂದದ್ದೇ…….

“ ಅಯ್ಯೋ…ಎಲ್ರೂ ಬಾಯಿ ಮುಚ್ರಯ್ಯ….ಸಾಕು ಕಂಡಿದ್ದೀನಿ ನಿಮ್ಮ ಕಾಳಜಿನಾ ” ಎಂದು ಕಣ್ಣನ್ನು, ಮೂಗನ್ನು ಒರೆಸಿಕೊಂಡು ಎದ್ದು ನಿಂತ. ಮತ್ತೆ ಸಡನ್ನಾಗಿ ಬಿಕ್ಕಿ ಬಿಕ್ಕಿ ಅಳುತ್ತ ಮಂಚದ ಮೇಲೆ ಕುಸಿದು “ ಮಮ್ಮೀ…ಮಮ್ಮೀ…ನಾನು ನಮ್ಮ ಮಮ್ಮೀನ ನೋಡ್ಬೇಕು. ಅವ್ಳು ನನ್ ಕನಸಲ್ಲಿ ಬಂದು…ಕಂದಾ….ಯಾಕಪ್ಪ…ನನ್ನ ಮರೆತು ಬಿಟ್ಟೆ ಅಂದ್ಲು….ನಾನು ಈಗ್ಲೇ ಮಮ್ಮೀನ ನೋಡ್ಬೇಕು….” ಎಂದು ಮಗುವಿನಂತೆ ಮತ್ತೆ ರೋಧಿಸತೊಡಗಿದ.

ಅಪರಿಮಿತ ಕುತಂತ್ರಿಗೆ ಪರಿಸ್ಥಿತಿಯ ಗಂಭೀರತೆ ಅರ್ಥವಾಗಿ, ಸಾಮ್ರಾಟನ ಮಾತೃ ಮಮತೆಯನ್ನು ಕಂಡು ಅವನ ಕರುಳು ಕಿತ್ತು ಬಂತು. ಕೂಡಲೇ ಸೇನಾಧಿಪತಿಗೆ ರಥ ಸಿದ್ದಮಾಡಲು ಹೇಳಿದ.  

ಸಾಮ್ರಾಟ ಕರ್ಚೀಫಿನಿಂದ ಸೊರ್ ಸೊರ್ ಎನ್ನುತ್ತಿದ್ದ ಮೂಗನ್ನು ಒರೆಸಿಕೊಳ್ಳುತ್ತ ರಥವನ್ನು ಹತ್ತಿ, ರಾಜಮಾತೆ ಇದ್ದ ಹಳ್ಳಿಯ ಕಡೆ ಹೊರಟ. ಅರಮನೆಯ ಸಮಸ್ತ ಸಿಬ್ಬಂದಿ, ಭಕ್ತಗಣಗಳು ಕಣ್ಣೀರು ಸುರಿಸುತ್ತ ಸಾಮ್ರಾಟನನ್ನು ಬೀಳ್ಕೊಟ್ಟರು. ರಥ ಸಾಗುತ್ತಿದಂತೆ ಸಾಮ್ರಾಟ ಆಗಾಗ ರಥದ ಹಿಂಬದಿ ಕಿಟಕಿಯಲ್ಲಿ ಇಣುಕು ಹಾಕುತ್ತಿದ್ದ. ಏನು ಕೊರತೆ ಕಾಣಿಸಿತೊ, ತಟ್ಟನೆ ರಥವನ್ನು  ನಿಲ್ಲಿಸುವಂತೆ ಸಾರಥಿಗೆ ಕೂಗಿ ಹೇಳಿದ.

ಹಾಗೆ ಅರಮನೆಯಿಂದ ಹೊರಟ ರಥ ಕಣ್ಣಿಂದ ಇನ್ನು ಮರೆಯಾಗಿರಲಿಲ್ಲ. ಇದ್ದಕ್ಕಿದಂತೆ ತಟ್ಟನೆ ನಿಂತದ್ದನ್ನು ಕಂಡ ಅಪರಿಮಿತ ಕುತಂತ್ರಿ “ ಮತ್ಯಾವ ಸಂಕಟ ಬಂತಪ್ಪ! ” ಎಂದು ರಥದತ್ತ ಓಡಿದ.  

ರಥದಿಂದ ಕೆಳಗಿಳಿದಿದ್ದ ಸಾಮ್ರಾಟ “ ಅಯ್ಯಾ…ಗೆಳೆಯ…ಕುತಂತ್ರಿ. ನೀನು ಮಾಡಿರುವ ವ್ಯವಸ್ಥೆಯಾದರು ಏನು?” ಎಂದು ಹಂಗಿಸುವಂತೆ ಮಾತಾಡಿದ. ಅಪರಿಮಿತನಿಗೆ ಏನೊಂದು ಅರ್ಥವಾಗದೆ ಪಿಳಿಪಿಳಿ ಕಣ್ಣು ಬಿಟ್ಟ. “ ನನ್ನನ್ನು ನೀನು ಇಷ್ಟೇನಾ ಅರ್ಥ ಮಾಡಿಕೊಂಡಿರೋದು. ಅಲ್ಲಯ್ಯ…ನಮ್ಮ ವಂಧಿಮಾಗದ ಸುದ್ದಿ ಮಿತ್ರರನ್ನು ಬಿಟ್ಟು ಯಾವತ್ತಾದರೂ ಮಮ್ಮೀಯನ್ನು ನೋಡಲು ಹೋಗಿದ್ದು ಉಂಟೆ?” ಎಂದ. ನಿಂತರೆ ಕೂತರೆ ಕ್ಯಾಮೆರಾಕ್ಕೆ ಪೋಸು ಕೊಡುವ ಸಾಮ್ರಾಟನ ತೆವಲನ್ನು ಮರೆತದ್ದಕ್ಕಾಗಿ ಅಪರಿಮಿತ ಕುತಂತ್ರಿ ಪೇಚಿಗೆ ಸಿಕ್ಕ.

ಈಗೇನು ಮಾಡುವುದೆಂದು ತಲೆ ಕೆರೆದುಕೊಂಡು ನಿಂತ ಅಪರಿಮಿತ ಕುತಂತ್ರಿಗೆ ದೂರದಲ್ಲಿ ಅರಮನೆಯಿಂದ ಬಕೆಟ್ ಸ್ವಾಮಿ, ತುತ್ತೂರಿ ಕುಮಾರಿ ಕ್ಯಾಮೆರಾ ಹಿಡಿದು ಓಡಿ ಬರುತ್ತಿರುವುದು ಕಂಡು ನಿಟ್ಟುಸಿರಿಸು ಬಿಟ್ಟ.   
ಚಂದ್ರಪ್ರಭ ಕಠಾರಿ
cpkatari@yahoo.com


© Copyright 2022, All Rights Reserved Kannada One News