'ಅನ್ನಬ್ರಹ್ಮ': ಹಂದಲಗೆರೆ ಗಿರೀಶ್ ಅವರ ಕವಿತೆ

'ಅನ್ನಬ್ರಹ್ಮ': ಹಂದಲಗೆರೆ ಗಿರೀಶ್ ಅವರ ಕವಿತೆ

Updated : 07.08.2022

ಜಗಕ್ಕೆ ಬೋಧಿವೃಕ್ಷ
ಗೆದ್ದಲುಗಳಿಗೆ ಅನ್ನವಷ್ಟೆ
ಯಾರಿಗೋ ಗೋವು ಮಾತೆ
ಹಲವರ ತಟ್ಟೆಯ ಅನ್ನ
ಹಟ್ಟಿಮಂದಿಯ ರಟ್ಟೆಯ ಕಸುವು

ಮಲೆತು ನಾರುವ ಗುಂಡಿಗಿಳಿಸಿ
ಸಹಮಾನವರ ತಲೆಮೇಲೆ ಹೊರಿಸಿ
ಅಸಹ್ಯಪಡುವ ಮಲವೂ ಅನ್ನವೇ
ಹಲವು ಜೀವಜಂತುಗಳಿಗೆ
ಫಲಪುಷ್ಪದ ಬೇರಿಗೆ  

ಸೊಳ್ಳೆ ಕಪ್ಪೆಗೆ ಹಾವು ಹದ್ದಿನ ಕಣ್ಣಿಗೆ
ಹದ್ದು ಇನ್ಯಾವುದೋ ಸದ್ದಿಗೆ
ಮೌನ ಶಬ್ಧದ ಅಬ್ಬರಕೆ
ಶಬ್ಧ ನಿಶ್ಯಬ್ಧದ ನೀರವತೆಗೆ

ಆಸೆ ದುಃಖದ ಕಡಲಿಗೆ
ಪ್ರೇಮ ಕಾಮದ ಕಿಡಿಗೆ
ಸೋಲು ಗೆಲುವಿನ ನಗೆಗೆ
ದೇವರು ಧರ್ಮದ ಅಮಲಿಗೆ

ನದಿ ಕಡಲ ಉಪ್ಪಿನ ದಾಹಕ್ಕೆ
ಕಡಲು ಮೋಡದ ಒಡಲಿಗೆ
ಮೋಡ ಇಳೆಯ ಸೆಳೆತಕ್ಕೆ
ಹಸಿರ ಬಸಿರಿಗೆ ಮಳೆಬೀಜ

ನೆರೆಬರ ಕುದಿವ ಲಾವಾ
ಸುನಾಮಿ ನಾಲಗೆಗೆ
ಊರು ಕೇರಿ ಮಂದಿರ ಮಹಾನಗರ
ನಾಗರೀಕತೆಗಳೇ ಸಾಲಲಾರವು

ಹರಿವ ಬೆಳಕು ಕತ್ತಲೆಯ ಹಸಿವಿಗೆ
ಹುಟ್ಟು ಸಾವಿನ ದವಡೆಗೆ
ಸಾವು ಶೂನ್ಯದ ತೆಕ್ಕೆಗೆ

ಭೂಮಿ ಸೂರ್ಯಚಂದ್ರ ನಕ್ಷತ್ರ
ನಭೋಮಂಡಲ ಕಾಲದ ಅನ್ನ
ಕಾಲ ಅನಂತ ಚಲನೆಗೆ
ಅನ್ನವೇ ಅನಂತ ಅಣು ಪ್ರಮಾಣು  

- ಹಂದಲಗೆರೆ ಗಿರೀಶ್


© Copyright 2022, All Rights Reserved Kannada One News