ರಾಜ್ಯದಲ್ಲಿ ಅಂಬುಲೆನ್ಸ್‌ ಸೇವೆಯಲ್ಲಿ ಸಮಸ್ಯೆ: ಭೀತಿಯಲ್ಲಿ ರಾಜ್ಯದ ಜನತೆ

ರಾಜ್ಯದಲ್ಲಿ ಅಂಬುಲೆನ್ಸ್‌ ಸೇವೆಯಲ್ಲಿ ಸಮಸ್ಯೆ: ಭೀತಿಯಲ್ಲಿ ರಾಜ್ಯದ ಜನತೆ

Updated : 25.09.2022

ಶನಿವಾರ ಸಂಜೆಯಿಂದ ರಾಜ್ಯದಲ್ಲಿ ಅಂಬುಲೆನ್ಸ್ ಸೇವೆಯಲ್ಲಿ ಸಮಸ್ಯೆಯಾಗಿದ್ದು, ರಾಜ್ಯದ ಜನರು ಆತಂಕಪಡುವಂತಾಗಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಟ್ವೀಟ್ ಮಾಡಿದ್ದು, “ತಾಂತ್ರಿಕ ಸಮಸ್ಯೆಯನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು” ಎಂದಿದ್ದಾರೆ.

ರಾಜ್ಯಾದ್ಯಂತ ದಿನಕ್ಕೆ ಸುಮಾರು 8 ಸಾವಿರ ಕರೆಗಳು 108ಗೆ ಹೋಗುತ್ತವೆ. 8 ಸಾವಿರ ಕರೆಗಳಲ್ಲಿ 2 ಸಾವಿರ ಪ್ರಕರಣಗಳು ಗಂಭೀರ ಆಗಿರುತ್ತವೆ. ಆದರೆ ಈ ಅಂಬುಲೆನ್ಸ್ ಸೇವೆ ಸಿಗದೇ ಇದ್ದರೆ 2 ಸಾವಿರ ಗಂಭೀರ ಪ್ರಕರಣಗಳಲ್ಲಿ ಸಾವು ನೋವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಶನಿವಾರ ಸಂಜೆಯಿಂದ ಅಂಬುಲೆನ್ಸ್ ಸೇವೆ ಇಲ್ಲದ ಕಾರಣ ಜನರಿಗೆ ಸಮಸ್ಯೆ ಎದುರಾಗಿದೆ. ತಾಂತ್ರಿಕ ಸಮಸ್ಯೆಯಿಂದ 108 ಸೇವೆ ಲಭ್ಯವಾಗುತ್ತಿಲ್ಲ ಎಂದು ಜನರು ದೂರುತ್ತಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಸಚಿವ ಸುಧಾಕರ್‌, “ತಾಂತ್ರಿಕ ಸಮಸ್ಯೆಯಿಂದ 108 ಆರೋಗ್ಯ ಕವಚ ಆಂಬ್ಯುಲೆನ್ಸ್ ಸೇವೆಗಳಲ್ಲಿ ವ್ಯತ್ಯಯ ಉಂಟಾಗಿದ್ದು ತಾಂತ್ರಿಕ ಅಡಚಣೆಗಳನ್ನು ನಿವಾರಿಸಲು ಹಾಗೂ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಆರೋಗ್ಯ ಇಲಾಖೆ ವತಿಯಿಂದ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ” ಎಂದಿದ್ದಾರೆ.

“ಸ್ವಯಂಚಾಲಿತ ಕಾಲ್ ಸೆಂಟರ್ ವ್ಯವಸ್ಥೆ ಮೂಲಕ ಕರೆಗಳ ವಿತರಣೆಗೆ ಪರ್ಯಾಯವಾಗಿ ಮ್ಯಾನುವಲ್ ಐಡಿಗಳನ್ನು ಸೃಷ್ಟಿಸಿ ಅಂಬ್ಯುಲೆನ್ಸ್ ಗಳನ್ನು ನಿಯೋಜಿಸಲಾಗುತ್ತಿದ್ದು, ಇದರೊಂದಿಗೆ 104 ಕಾಲ್ ಸೆಂಟರ್ ನಲ್ಲಿ 108 ಆಂಬ್ಯುಲೆನ್ಸ್ ಸೇವೆಗೆ ಓವರ್ ಫ್ಲೋ ಕಾಲ್ ಸೆಂಟರ್ ಸ್ಥಾಪಿಸಲು ಸಹ ಸೂಚನೆ ನೀಡಲಾಗಿದೆ” ಎಂದು ತಿಳಿಸಿದ್ದಾರೆ.

“108 ಹಾಗೂ 112 ಕಾಲ್ ಸೆಂಟರ್ ಗಳಲ್ಲಿ ಅಧಿಕ ಕರೆ ಸ್ವೀಕರಿಸಲು ಅನುಕೂಲವಾಗುವಂತೆ ಪ್ರಸ್ತುತ ಇರುವ ಸಿಬ್ಬಂದಿಗಳ ಜೊತೆಗೆ ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಅಂಬ್ಯುಲೆನ್ಸ್ ಡ್ರೈವರ್‌‌ಗಳಿಗೆ ತಮ್ಮ ಮೊಬೈಲ್ ಮೂಲಕ ಆಸ್ಪತ್ರೆಗಳಿಂದ ನೇರವಾಗಿ ಕರೆಗಳನ್ನು ಸ್ವೀಕರಿಸಲು ಸಹ ಸೂಚನೆ ನೀಡಲಾಗಿದೆ” ಎಂದು ಮಾಹಿತಿ ನೀಡಿದ್ದಾರೆ.

“ತಾಂತ್ರಿಕ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಸಮರೋಪಾದಿಯಲ್ಲಿ ಎಲ್ಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಪರ್ಯಾಯ ವ್ಯವಸ್ಥೆಗಳ ಮೂಲಕ ಸೇವೆಯಲ್ಲಿ ಉಂಟಾಗಿರುವ ತಾತ್ಕಾಲಿಕ ವ್ಯತ್ಯಯವನ್ನು ಕನಿಷ್ಠ ಮಟ್ಟದಲ್ಲಿಡಲು ಪ್ರಯತ್ನಿಸಲಾಗುತ್ತಿದೆ” ಎಂದಿದ್ದಾರೆ.


© Copyright 2022, All Rights Reserved Kannada One News