ಅಲಿಕತ್ತು ಮತ್ತು ವಲ್ಲಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

Related Articles

ಅಂಕಿ ಅಂಶಗಳೆಂಬ ಬೆಂಕಿಯ ಬೆನ್ನೇರಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಗಂಜಿಗಿರಾಕಿ ಟ್ರೋಲ್ ಭಕ್ತರ ಗೋಳು ; ಕೆಜಿಗಟ್ಟಲೆ ಬೈಗುಳ ತಿನ್ನುವ ಭಂಡಬಾಳು: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

"ಮುಳ್ಳನ್ನು ಪೊರೆದ ಗುಲಾಬಿ ಹೂವು" ನಾಲ್ಕನೆಯ ಕಂತು: ಸಿಹಾನ ಬಿ.ಎಂ ಅವರ ವಾರದ ಅಂಕಣ

ಧ್ಯಾನ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಪುರಾತನ ಪುಣ್ಯಕ್ಷೇತ್ರಗಳ ಅಭಿವೃದ್ಧಿ; ದೇಶಕ್ಕೆ ಬಂದ ಅಚ್ಚೇದಿನ: ಚಂದ್ರಪ್ರಭ ಕಠಾರಿ ಅವರ ವಾರದ ಅಂಕಣ

ಮಿಥ್ ಗಳ ಲೋಕದಲ್ಲಿ ಗುಬ್ಬಚ್ಚಿಯಾದ ಗುಬ್ಬಿಮರಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

ಜಾವಕಟ್ಟೋ ಜಂಭೂದ್ವೀಪಸ್ಥ: ಡಾ.ರವಿಕುಮಾರ್ ನೀಹ ಅವರ ಅಂಕಣ

ರಜನಿ ‘ದ’ ಸೂಪರ್ ಸ್ಟಾರ್: ಎಡಿಟರ್‌ ಸ್ಪೆಷಲ್

ಮಣ್ಣು ಮಾರಲು ವಿರೋಧಿಸಿದ ಮುದುಕಿ: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಬಿಜೆಪಿಯಿಂದ ‘ಅನ್ನ’ಕ್ಕೂ ಕನ್ನ…!: ಎಡಿಟರ್‌ ಸ್ಪೆಷಲ್

ಅಲಿಕತ್ತು ಮತ್ತು ವಲ್ಲಿ: ಸಿಹಾನ ಬಿ.ಎಂ. ಅವರ ವಾರದ ಅಂಕಣ

Updated : 24.10.2022

ಕಥೆಯೊಳಗೊಂದು ಕಥೆ ಹೆಣೆದ ಬದುಕು ಅವಳದ್ದು. ಅವಳೊಳಗೊಬ್ಬಳು ಅವಿತಿದ್ದರೂ ಹೊರಗವಳು ನಗುಮುಖದ ಸುಂದರಿ. ಉರಿಬಿಸಿಲಿನಲ್ಲಿ ಬೆಂದು, ಕೊರೆಯುವ ಚಳಿಯಲ್ಲಿ ಹಿಪ್ಪೆಯಾಗಿ  ಅವಳು ಸವೆಸಿದ ದಾರಿಗಳು ಮಸುಕಾಗಿವೆ. ಬೆವರ ಹನಿಗಳ ಜೊತೆಯಾಡಿ ಬಣ್ಣದ ಕನಸುಗಳಿಗೆ ಬಲವಂತದ ಪರದೆ ಎಳೆಯುತ್ತಾ ಅನಿವಾರ್ಯತೆಗೆ ಒಗ್ಗಿ ಬದುಕನ್ನು ಎದುರು ನೋಡುತ್ತಿರುವಳು. ಒಣಗಿದ ಮಲ್ಲಿಗೆಯಲ್ಲೂ, ಒಡೆದ ಪಾದಗಳಲ್ಲೂ, ನೆರಿಗಟ್ಟಿದ ಸೀರೆಯಲ್ಲೂ, ಹೊಳಪು ಕಳೆದುಕೊಂಡ ಉಗುರುಗಳಿಂದಲೂ ಅವಳ ಕಥೆಗಳು ತುಂಬಿಕೊಂಡಿದ್ದವು. ಇಪ್ಪತ್ತೈದರೊಳಗೆ ಒಂಬತ್ತು ಮಕ್ಕಳನ್ನು ಹೆಡೆದ ಅವಳ ಒಡಲಿಗೆ ಕಥೆಗಳದೇ ಜಗತ್ತು. ಅಡುಗೆಕೋಣೆಯನ್ನೇ ಬ್ರಹ್ಮಾಂಡವೆಂದೇ ನಂಬಿದವಳು ಐವತ್ತರ ಆಸುಪಾಸಿನಲ್ಲಿ ಹೊರಗಿನ ಕಿರಣಗಳ ಪ್ರಕಾಶತೆಯಲ್ಲಿ ಮಗುವಿನಂತಾದ ಕಥೆಯೂ ಅವಳೊಂದಿಗಿದೆ. ಓದು ಬರಹದ ಗಂಧಗಾಳಿಯೂ ಸೋಕಿಲ್ಲದ ಅವಳಿಗೆ ಸುತ್ತಮುತ್ತ ನಡೆದ ವೃತ್ತಾಂತಗಳಲ್ಲಿ ಅವಳದೇ ಆದ ತತ್ವಜ್ಞಾನವನ್ನು ಸುರಿಯುವಷ್ಟು ಸುದ್ಧಿಗಳು ಅವಳ ಬತ್ತಲಿಕೆಯಲ್ಲಿದೆ. ಮುಳ್ಳಿನ ಹಾದಿಯ ತುಂಬಾ ನಡೆದವಳಿಗೆ ಮುಳ್ಳು ಚುಚ್ಚಿದರೂ, ರಕ್ತ ಒಸರಿದರೂ ನೋವಾಗದಷ್ಟು ಮುಳ್ಳುಗಳೊಂದಿಗೆ ಗೆಳೆತನ ಬೆಳೆಸಿದ್ದಳು. ರಾಶಿ ಹಾಕಿದ ಕಥೆಗಳಿಂದ ಒಂದೊಂದೇ ಕಥೆಗಳನ್ನು ಹೆಕ್ಕಿ ಬಲಿತ ಹೆಣ್ಮಕ್ಕಳ ಮುಂದೆ ಧೈರ್ಯ ತುಂಬುವ ಅವಳು ಬಲು ದಿಟ್ಟೆ. ಬಿರುಕು ಬಿಟ್ಟ ಬಯಲಲ್ಲೂ ಬೀಡು ಕಟ್ಟುವ ತಂತ್ರ ಆಕೆಗಿದೆ. ಅಷ್ಟಿಲ್ಲದಿದ್ದರೆ ಅವಳಿಂದು ಬಾವಿ, ಕೆರೆಯ ಪಾಲಾಗುತ್ತಿದ್ದಳೇನೋ...

ಒಂದು ಮಧ್ಯಾಹ್ನದ ಹೊತ್ತಿನಲ್ಲಿ ಬಿಲ್ಲೆಯೊಡನೆ ಹೆಜ್ಜೆ ಹಾಕಿ ಆಡುತ್ತಿದ್ದವಳನ್ನು ದರದರನೆ ಎಳೆದು ಮನೆಯೊಳಗೆ ಕೂಡಿಸಿದ ವಿಚಿತ್ರ ಸನ್ನಿವೇಶ ಅವಳ ಬದುಕನ್ನೇ ಬದಲಾಯಿಸಿತು. ಬೊಂಬೆಗೆ ಸೀರೆ ಉಡಿಸುತ್ತಾ, ಉಯ್ಯಾಲೆಯಲ್ಲಿ ಜೋಕಾಲಿಯಾಡುತ್ತಾ, ಗಾಜಿನ ಮನೆಗೊಂದು ಹೊಸ ಗಾಜು ಜೋಡಿಸಬೇಕಾದ ಕಾಲದಲ್ಲಿ ಹಸೆಮಣೆಯಲ್ಲಿ ಕೂರುವ ಅನಿವಾರ್ಯತೆಗೆ ನೂಕಿದ ಆ ಕ್ಷಣವದು. ಬದುಕು ಅಂದರೇನೆಂದು ಅರಿಯದ, ಜಗತ್ತನ್ನು ಈಗಷ್ಟೇ ಪಿಳಿಪಿಳಿ ಕಣ್ಣು ಬಿಟ್ಟು ನೋಡುತ್ತಿರುವಾಗಲೇ ಮದುವೆ ಎಂಬ ಬಂಧನದಲ್ಲಿ ಬಂಧಿಸಿಡಲಾಯಿತು. ಹೆಜ್ಜೆಗೆ ಹೆಜ್ಜೆಯಿಟ್ಟು ಕುಂಟುಬಿಲ್ಲೆ ಆಟ ಆಡುವ ಸಮಯದಲ್ಲಿ ಒಬ್ಬಾತ ಆಕೆಯ ಕೈ ಹಿಡಿದ.    

ಕಪ್ಪುಬಟ್ಟೆ ಇನ್ನೂ ಇಳಿದಿಲ್ಲದ ಕಾಲದಲ್ಲಿ ಎರಡು ಜೊತೆ ವಲ್ಲಿಯನ್ನು(ಚಾದರ) ಹೊದ್ದು ಗಂಡನ ಮನೆಗೆ ಕಾಲಿಟ್ಟಳು. ಆವಾಗಲೆಲ್ಲ ಕಪ್ಪುಬಣ್ಣದ ಬುರ್ಖಾದ ಪರಿಚಯ ಜನರಿಗಿರಲಿಲ್ಲ. ಕೊಲ್ಲಿ ರಾಷ್ಟ್ರದಿಂದ ಆಮದಾಗಿ ಆ ಬಟ್ಟೆ ಈ ನಾಡಿಗೆ ಬಾರದಿರಲು ಅಂದಿನ ದಿನಗಳಲ್ಲಿ ಕೊಲ್ಲಿ ರಾಷ್ಟ್ರಕ್ಕೆ ಹೋಗುವ ಪುರುಷರ ಸಂಖ್ಯೆ ಅತೀ ವಿರಳವಾಗಿದ್ದ ಕಾರಣವೂ ಇತ್ತು. ಆದರೆ ಅಂದು ದೊಡ್ಡ ದೊಡ್ಡ ವಲ್ಲಿಗಳಿಂದ ಮುಸ್ಲಿಮ್ ಮಹಿಳೆಯರು ಮೈ ಪೂರಾ ಮುಚ್ಚಿ ನಡೆಯುತ್ತಿದ್ದರು. ಆ ನೀಳಚಾದರ ಅವರ ದೇಹದ ಮೇಲೆ ಹೊದ್ದರೆ ಗಾಳಿಪಾಟದಂತೆ ನೇತಾಡುತ್ತಿತ್ತು. ದೇಹದ ಉಬ್ಬುತಗ್ಗುಗಳು ಯಾವುದೂ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. ಅಂತಹದೇ ಮದುಮಗಳಿಗಾಗಿ ಖರೀದಿಸಿದ ತನ್ನ ದೇಹದ ತೂಕಕ್ಕಿಂತಲು ಭಾರವಾದ ಹೊಸ ವಲ್ಲಿಯನ್ನು ತಲೆಯಿಂದ ಹಿಡಿದು ಕಾಲಬುಡದವರೆಗೂ ಮರೆಮಾಚಲು ಆಕೆ ಪಡಬಾರದ ಪಾಡು ಪಟ್ಟುಕೊಂಡು ಎಡವಿ ಬೀಳದಂತೆ ಆ ಪುಟ್ಟ ಕಾಲುಗಳಿಂದ ಹೆಜ್ಜೆಯಿಡಬೇಕು. ಅಪ್ಪಿ ತಪ್ಪಿ ತಲೆ ಎತ್ತಿ ನಡೆದರೆ, " ಏ ಪೆಣ್ಣೇ..ಪುದಿಯೆಪೆಣ್ಣ್ ಅಙನೆಲ್ಲ ತಲೆ ಒಯ್ತಿಟ್ ನೋಕೊಗ್ ತೀರಾಂಟ್ ಗೊಂತಿಲ್ಲೆ ನಿಕ್ಕ್...( ಏಯ್ ಹೆಣ್ಣೇ..ಮದುಮಗಳು ಹಾಗೆಲ್ಲ ತಲೆ ಎತ್ತಿ ನಡೆಯಬಾರದೆಂದು ಗೊತ್ತಿಲ್ಲವೇ ನಿನಗೆ..) ಬೊಚ್ಚುಬಾಯಿಯ ಸೋದರಜ್ಜಿಯ ಅಬ್ಬರದ ಗಡಸು ಧ್ವನಿ ಹಿಂದಿನಿಂದ ಎಚ್ಚರಿಸುತ್ತಿತ್ತು. ವಲ್ಲಿಯ ಮೇಲೆ ತಾತ್ಸಾರವೋ ಮದುವೆಯ ಮೇಲೆ ಅಸಮಾಧಾನವೋ ಆಕೆಗೆ ಬಲಿ ಕೊಡಲು ಎಳೆದೊಯ್ಯುವ ಹೋರಿಯ ನೆನಪಾಯಿತು. ಭಾರವಾದ ಸೀರೆ, ಅದರ ಮೇಲೊಂದಿಷ್ಟು ಆಭರಣ, ತಲೆ ತುಂಬಾ ಮಲ್ಲಿಗೆಯ ದಂಡು ಇದೆಲ್ಲವನ್ನು ಮರೆಮಾಚಲು ದೊಡ್ಡದಾದ ಅಗಲ ಚಾದರ. ಒಂದು ಕೈಯಿಂದ ಚಾದರವನ್ನು ಎಳೆದು ತಲೆ ಮುಚ್ಚಿ ಮುಖಕ್ಕಿಳಿಸಬೇಕು. ಇನ್ನೊಂದು ಕೈಯಲ್ಲಿ ಸೀರೆ ಮತ್ತು ಚಾದರ ಕಾಲಬೆರಳ ತುದಿಗೆ ಸಿಕ್ಕಿ ಎಡವಿ ಬೀಳದಂತೆ ಹೆಜ್ಜೆ ಜೋಡಿಸಿ ನಡೆಯಬೇಕು. ಹೇಗೋ ಹರಸಾಹಸ ಪಡುತ್ತಾ ದಿಢೀರನೆ ಒಂದು ಹೊಸ ಬದುಕಿಗೆ ಆಕೆ ಒಗ್ಗಿಕೊಳ್ಳಲೇಬೇಕಿತ್ತು.

ಅವಳೆದೆಯಲ್ಲಿ ಅದ್ಯಾವ ನೋವಿತ್ತೋ...ಆಗಾಗ ಕಿವಿಯನ್ನು ಒತ್ತಿ ಹಿಡಿಯುತ್ತಿದ್ದಳು. ಮದುವೆ ನಿಶ್ಚಿತವಾದ ದಿನದಿಂದ ಆಜ್ಞೆಗಳದೇ ಕಾರುಬಾರು. ಗೆಳತಿಯರೊಂದಿಗೆ ಹೊರಗೋಗಿ ಆಡುವಂತಿಲ್ಲ. ಓರಗೆಯ ಹುಡುಗರೊಂದಿಗೆ ಮಾತನಾಡುವಂತಿಲ್ಲ. ಲಂಗ ದಾವಣಿಯ ಬದಲಿಗೆ ಸೀರೆ ಉಟ್ಟು ನಡೆಯಬೇಕು. ಒಲೆಯ ಮುಂದೆ ಕೂತು ಮೈಕೈ ಆಗಾಗ ಸುಟ್ಟುಕೊಳ್ಳುವ ನೋವಿನ ಜಗತ್ತಿಗೆ ಪ್ರವೇಶ. ಕಿವಿಯಲ್ಲಿ ಅಲಿಕತ್ತು ಇಲ್ಲವೆಂಬ ಗಂಡಿನ ಹಿರಿಯಕ್ಕನ ರಂಪಾಟಕ್ಕೆ ವಾರದ ಹಿಂದೆ ಅಪ್ಪ ಕಿವಿಯ ಚರ್ಮದ ತುದಿಗೆ ಎಂಟು ತೂತು ಚುಚ್ಚಿಸಿದರು. ಅದಕ್ಕೆ ಭಾರವಾದ ಅಲಿಕತ್ತನ್ನು ಜೋಡಿಸಿಯೂ ಆಯಿತು.   

ಈ ವಲ್ಲಿ ಮತ್ತು ಅಲಿಕತ್ತು ಆಕೆಗದು ಪ್ರಶ್ನೆಗಳ ಲೋಕವಾಗಿತ್ತು. ಅವಳ ಪ್ರಶ್ನೆಗಳಿಗೆ ಅಜ್ಜಿ ಹೇಳುವ ಕತೆಗಳು ಕೇಳಲು ರೋಚಕವಾಗಿತ್ತು. ಒಂದು ಹೆಣ್ಣಿನ ಮತ್ಸರಕ್ಕೆ ಮತ್ತೊಂದು ಹೆಣ್ಣಿನ ಕಿವಿಗೆ ಅಲಿಕತ್ತು  ಪ್ರಾಯಶ್ಚಿತ್ತವಾಗಿದ್ದು ಅದು ಎಲ್ಲಾ ಮುಸ್ಲಿಮ್ ಹೆಣ್ಣಿಗೆ ಕಡ್ಡಾಯ ಪದ್ಧತಿಯಾಗಿ ಮಾರ್ಪಟ್ಟಿತಂತೆ. ಕಣ್ಣು, ಮೂಗು, ಬಾಯಿ ಅರಳಿಸಿ ಅಜ್ಜಿ ವಿವರಿಸುವ ಕಥೆಯಲ್ಲಿ ಅಜ್ಜಿಯೇ ಪ್ರಮುಖ ಪಾತ್ರಧಾರಿಯಾಗಿ ಅವಳಿಗೂ, ಅವಳ ಗೆಳತಿಯರಿಗೂ ಕಾಣುತ್ತಿತ್ತು. ಅಜ್ಜಿ ಹೇಳುವ ಉಪ್ಪು, ಖಾರ, ಹುಳಿ ಬೆರೆಸಿದ ಮಸಾಲೆ ಕಥೆಗಳನ್ನು ಸತ್ಯವೆಂದು ನಂಬಿದ್ದ ಅವಳ ಗೆಳತಿಯರ ಗುಂಪಿನಲ್ಲಿ ಸಾರಾ ಯಾವಾಗಲು ಅಜ್ಜಿಯ ಮುಂಗೋಪಕ್ಕೆ ಗುರಿಯಾಗುತ್ತಿದ್ದಳು.  

ಓರಗೆಯ ಗೆಳತಿಯರಲ್ಲಿ ಸಾರಾ ಮತ್ತು ಸಾರಾಳ ಕುಟುಂಬ ಇವರೆಲ್ಲರಿಗಿಂತ ಭಿನ್ನವಾಗಿದ್ದರು. ಇವಳು ಸೇರಿ ಉಳಿದ ಗೆಳತಿಯರೆಲ್ಲರು ಲಂಗ ಧಾವಣಿ ಧರಿಸಿದರೆ ಸಾರಾ ಮಂಡಿಯ ಕೆಳಗಿನವರೆಗಿನ ಉದ್ದ ಫ್ರಾಕ್ ಧರಿಸುತ್ತಿದ್ದಳು. ಎಲ್ಸಾರಾ(ತಲೆವಸ್ತ್ರ) ಧರಿಸುವ ಹುಡುಗಿಯರ ನಡುವೆ ಸಾರಾ ಎರಡು ಜಡೆಯ ಸುಂದರಿಯಾಗಿದ್ದಳು. ಸಾರಾಳ ತಾಯಿ ವಲ್ಲಿ ಧರಿಸುತ್ತಿರಲಿಲ್ಲ. ಸಲ್ವಾರ ಧರಿಸಿ ಅದರ ಮೇಲೆ ದುಪ್ಪಟ್ಟದಿಂದ ತಲೆಕೂದಲು ಮರೆಮಾಚುತ್ತಿದ್ದರು. ಅವರ ಕಿವಿಗಳಲ್ಲಿ ಅಲಿಕತ್ತಿನ ಶಬ್ದಗಳಿರಲಿಲ್ಲ. ಅಜ್ಜಿ ಈ ಅಲಿಕತ್ತಿನ ಕಥೆಗಳನ್ನು ಹೇಳಿದಾಗಲೆಲ್ಲ, " ಅಜ್ಜಿ...ಅದೆಲ್ಲ ಕಟ್ಟುಕತೆಗಳು. ನನ್ನಪ್ಪಮ್ಮ ಇದನ್ನೆಲ್ಲ ನಂಬಬಾರದೆಂದು ಹೇಳುತ್ತಿರುತ್ತಾರೆ. ಸಾರಾ ಮತ್ತು ಹಾಜಿರಾ ಬೀಬಿಯವರ ಚರಿತ್ರೆಯಲ್ಲಿ ಅಂತಹ ವಿಷಯ ಇಲ್ಲವಂತೆ. ಇಸ್ಲಾಮಿನಲ್ಲಿ ಅದೆಲ್ಲ ಇಲ್ಲಜ್ಜಿ.." ಎನ್ನುತ್ತಾ ತನ್ನ ಕಥಾಜಗತ್ತಿಗೆ ಅರ್ಧದಲ್ಲೇ ತೆರೆಯೆಳೆಯುವ ಸಾರಾಳನ್ನು ಕಂಡರೆ ಅಜ್ಜಿಗಾಗದು.‌ ಅವಾಗಲೆಲ್ಲ ಇವಳಿಗೆ ಸಾರಾ ಅಂದರೆ ದೊಡ್ಡ ಅಚ್ಚರಿ. ಸಾರಾಳಲ್ಲಿದ್ದ ವಿಶೇಷತೆ ಇವಳಿಗೆ ಆಕರ್ಷಣೆಯೂ ಆಗಿತ್ತು. ಅಜ್ಜಿಯ ಕತೆ ಮುಗಿದ ಬಳಿಕ ಸಾರಾಳಿಂದಲೂ ಅಷ್ಟಿಷ್ಟು ವಿಷಯ ಸಂಗ್ರಹಿಸುವ ಹವ್ಯಾಸವನ್ನು ಬೆಳೆಸಿಕೊಂಡಳು. ಅವಳೊಳಗೆ ಸುಪ್ತವಾಗಿದ್ದ ಕಿಚ್ಚು ಆಗಲೇ ಹೊತ್ತಿರಬಹುದೇನೋ...ಅದಕ್ಕೂ ಹೆಚ್ಚು ಕಾಲದ ಆಯುಷ್ಯ ಇರಲಿಲ್ಲ. ಅದರ ನಿರೀಕ್ಷೆ ಮೊದಲೇ ಇರುವುದರಿಂದ ಬೇಗಕ್ಕೆ ಆಕೆ ನೊಂದುಕೊಳ್ಳಲಿಲ್ಲ. ಒಂದೊಂದೇ ವರ್ಷಗಳ ಅಂತರದಲ್ಲಿ ಒಬ್ಬೊಬ್ಬ ಗೆಳತಿಯರ ಕುಂಟುಬಿಲ್ಲೆಗೆ ಶಾಶ್ವತ ಬ್ರೇಕ್ ಬೀಳುತ್ತಿದ್ದರೆ ಸಾರಾಳಿಗಾಗಿ ಪ್ರತಿವರ್ಷ ತಯಾರಾಗಿ ಕಾಯುತ್ತಿತ್ತು ಪುಸ್ತಕದ ದೊಡ್ಡ ಪ್ಯಾಕ್.

" ಇವೆಲ್ಲ ನಾವೇ ನಮ್ಮ ಮೇಲೆ ಹೇರಿಕೊಂಡ ಅನಾಚಾರಗಳು.‌ ನಿಮ್ಮ ದಕ್ಷಿಣ ಕನ್ನಡದಲ್ಲಿ ಒಂದಷ್ಟು ಅನಾಚಾರಗಳಿದ್ದರೆ ನಮ್ಮ ಉತ್ತರ ಕರ್ನಾಟಕದಲ್ಲಿ ಇದಕ್ಕಿಂತಲೂ ಹೆಚ್ಚೇ ಇವೆ. ಇದನ್ನೆಲ್ಲ ಬರೀ ಹೆಣ್ಣುಮಕ್ಕಳ ಮೇಲೆ ಹೇರುತ್ತಿದ್ದಾರೆ. ಹೆಣ್ಣುಮಕ್ಕಳಿಗೆ ವಿದ್ಯೆ ಕೊಡದೆ ನಾಲ್ಕು ಗೋಡೆಯೊಳಗೆ ಬಂಧಿಸಿ ಮೂಲೆಗುಂಪು ಮಾಡುತ್ತಿದ್ದಾರೆ. ಹೆಣ್ಣು ಮಕ್ಕಳಿಗೆ ಅದೆಷ್ಟು ಹಕ್ಕುಗಳನ್ನು ಇಸ್ಲಾಮ್ ನೀಡಿದೆ ! ಆದರೆ ಅದೇ ಧರ್ಮದ ಹೆಸರಿನಲ್ಲಿ ಇಂತಹ ಅನಾಚಾರಗಳನ್ನು ಹೇರಿ ನಿಮ್ಮ ಬದುಕನ್ನು ನೀವೇ ಹಾಳು ಮಾಡುತ್ತಿದ್ದೀರಿ. ನಿಮ್ಮ ಹಲೀಮಾಳಿಗಾದರು ವಿದ್ಯೆ ಕಲಿಸಿ. ಆ ಮಗು ಶಾಲೆಗೆ ಹೋಗಿ ಎರಡಕ್ಷರವಾದರೂ ಕಲಿಯಲಿ..." ಸಾರಾಳ ಅಮ್ಮ ಆಗಾಗ ಬಂದು ಅಮ್ಮನ ಬಳಿ ಪಿಸುಗುಟ್ಟುವುದನ್ನು ಈಕೆ ಹಲವಾರು ಬಾರಿ ಕೇಳಿಸಿಕೊಂಡಿದ್ದಾಳೆ. ಅವಳ ಆಸೆಯ ಕಣ್ಣು ಅಮ್ಮನನ್ನು ದಿಟ್ಟಿಸುತ್ತಲಿತ್ತು. ತನ್ನ ಬದುಕು ಇಷ್ಟೇ ಎಂದು ಗೊತ್ತಿದ್ದೂ ಹುಸಿಯಾಸೆಗೆ ಪ್ರತಿಕ್ಷಣ ಬಲಿಯಾಗುತ್ತಿದ್ದಳು.

" ನನಗೂ ಆಸೆಯಿದೆ ಫಾತಿಮಾ... ಆದರೇನು ಮಾಡಲಿ ? ನಿಮಗೆ ಸಿಕ್ಕ ಭಾಗ್ಯದ ಬಾಗಿಲು ನಮ್ಮ ಪಾಲಿಗಿಲ್ಲ..." ಎಂದು ನೋವಿನೊಂದಿಗೆ ಉಸುರುವ ಅಮ್ಮನ ಮೆಲುದನಿ ಅಜ್ಜಿಗೆ ಕೇಳಿಸದಂತೆ ಜಾಗ್ರತೆ ವಹಿಸುತ್ತಿತ್ತು. ಬಾಯಿ ತುಂಬಾ ಎಲೆ ಅಡಿಕೆ ತುಂಬಿ ಪಟ್ಟೆಲ್ಸಾರಾದ ತುದಿಯಿಂದ ತುಟಿಯ ತುದಿಯನ್ನು ಒರಸುತ್ತಾ, ಪೀಕಾಣಿಯಲ್ಲಿದ್ದ ಎಂಜಲನ್ನು ಚೆಲ್ಲಲ್ಲು ಬರುತ್ತಿದ್ದ ಅಜ್ಜಿಯ ಹೆಜ್ಜೆ ಶಬ್ಧಕ್ಕೆ ಅವರಿಬ್ಬರು ತಕ್ಷಣವೇ ಮೌನವಾಗುತ್ತಿದ್ದರು.   

ಇಂದೇಕೋ ಆಕೆಗೆ ಸಾರಾ ಬಹಳವಾಗಿ ನೆನಪಾದಳು. ಒಮ್ಮೆ ಆಕೆಯನ್ನು ಕಾಣಬೇಕು, ಮಾತನಾಡಬೇಕು ಎಂಬ ಆಸೆ ತೀವ್ರವಾಗ ತೊಡಗಿತು. ಮದುಮಗಳು ಕೂತಿದ್ದ ಕುರ್ಚಿಯ ಸುತ್ತ ಹೆಂಗಸರು ಸುತ್ತುಗಟ್ಟಿ ನಿಂತಿದ್ದರು. ಅವರೆಡೆಯಿಂದ ಅವಳ ಕಣ್ಣು ಸಾರಾಳನ್ನು ಹುಡುಕುತ್ತಲಿತ್ತು. ತಲೆ ಮೇಲಕ್ಕೆತ್ತಿ ನೋಡಲು ಧೈರ್ಯವಾಗದೆ ಸಾರಾಳ ಕಾಲಿನಲ್ಲಿದ್ದ ಎಲ್ಲರಿಗಿಂತ ಭಿನ್ನವಾಗಿದ್ದ ಬಣ್ಣದ ಸುಂದರ ಗೆಜ್ಜೆಯ ಹುಡುಕಾಟದಲ್ಲಿದ್ದಳು.
ವಾರದ ಹಿಂದೆ ಮಾತಿಗೆ ಸಿಕ್ಕಿದ ಸಾರಾ ಈ ಮದುವೆಯ ಬಗ್ಗೆ ಅವಳದೇ ಭಾಷೆಯಲ್ಲಿ‌ ವಿರೋಧ ವ್ಯಕ್ತಪಡಿಸಿದ್ದಳು. ಇವಳಿಗದು ಹೊಸ ಭಾಷೆಯಾಗಿತ್ತು. ಓದು, ಸಾಹಿತ್ಯದ ಭಂಡಾರವಾಗಿದ್ದ ತನ್ನಪ್ಪನಿಂದ ದೊರೆತ ಒಂದಷ್ಟು ನೈಜಕತೆಯನ್ನು ಸಾರಾ ಗೆಳತಿಯ ಮುಂದಿಟ್ಟಳು. ತನ್ನ ಅಕ್ಕ ತುಳಸಿಯನ್ನು ಬಾಲ್ಯವಿವಾಹಕ್ಕೆ ಒಡ್ಡುತ್ತಿರುವ ಸುದ್ಧಿ ತಿಳಿದ ಬಾಲ ಅಂಬೇಡ್ಕರ್ ಅದರ ವಿರುದ್ಧ ಧ್ವನಿಯೆತ್ತಿ ಆ ಮದುವೆಯನ್ನು ನಿಲ್ಲಿಸಿದ ಹೋರಾಟದ ಕಥೆ, ಬಾಲ್ಯಗೆಳತಿ ಮಾಧುರಿಯ ಬಾಲ್ಯವಿವಾಹವನ್ನು ತಡೆಯುವ ಪ್ರಯತ್ನ ಮಾಡಿದರೂ ಅದರಲ್ಲಿ ಯಶಸ್ವಿಯಾಗದ ಅಂಬೇಡ್ಕರರ ನೋವಿನ ವ್ಯಥೆಯನ್ನು ಒಂದೊಂದಾಗಿ ಬಿಡಿಸಿದಳು. ಮದುವಣಗಿತ್ತಿಯ ಕಣ್ಣೊಳಗಿನ ಕನಸುಗಳನ್ನು ಗುರುತು ಹಚ್ಚುವ ಗೆಳತಿ ಸಾರಾಳ ಕಣ್ಣಿನಲ್ಲಿದ್ದ ಭರವಸೆಯ ಹೊಳಹು ಇವಳಿಗೂ ದಾಟಿಸುವಂತಿತ್ತು ಆ ಪುಟ್ಟ ಸಂಭಾಷಣೆ.    

ಅಜ್ಜಿಯ ಕತೆಯ ಲೋಕಕ್ಕೂ ಇವರ ಬದುಕಿಗೂ ಅದ್ಯಾವುದು ಸರಿ ಹೊಂದುತ್ತಿರಲಿಲ್ಲ. ಹಾಗೆ ನೋಡಿದರೆ ನಾವು ಮುಸ್ಲಿಮರು. ಇವರೂ ಮುಸ್ಲಿಮರೇ. ಸಾರಾಳ ಅಪ್ಪ ಊರಿಗೆ ದೊಡ್ಡ ಸಾಬರು. ಸರಕಾರಿ ಉದ್ಯೋಗದಲ್ಲಿರುವುದರಿಂದ ಊರಿಂದೂರಿಗೆ ಪ್ರಯಾಣ ಇವರದ್ದು.‌ ಅವರ ಮಾತಿಗೆ ಎದುರಾಡುವ, ಅವರನ್ನು ಧಿಕ್ಕರಿಸುವ ಧೈರ್ಯ ಆ ಊರಿನಲ್ಲಿ ಯಾರಿಗೂ ಇರಲಿಲ್ಲ. ಊರವರೆಲ್ಲರ ಪ್ರೀತಿ, ಗೌರವವನ್ನು ಆ ಕುಟುಂಬ ಬಂದ ಕೆಲವೇ ದಿನಗಳಲ್ಲಿ ಸಂಪಾದಿಸಿಯೂ ಆಗಿತ್ತು.‌ ಸಾರಾ ದಿನ ಬೆಳಗಾದರೆ  ಹೆಗಲಿಗೊಂದು ಚೀಲ ಹೊತ್ತು ಶಾಲೆಯತ್ತ ನಡೆದರೆ ಅದನ್ನೇ ಆಸೆಗಣ್ಣಿನಿಂದ ನೋಡುವ ಅವಳ ಗೆಳತಿಯರ ಗುಂಪು ಹಗ್ಗ ನೇಯುವುದಕ್ಕೋ, ಭತ್ತ ಕುಟ್ಟುವುದಕ್ಕೋ, ಅಡಿಕೆ ಹೆಕ್ಕುವುದಕ್ಕೋ ಮುಖ ಮಾಡುತ್ತಿದ್ದರು. ಓದುವ, ಬರೆಯುವ ಭಾಗ್ಯವಿಲ್ಲದ ಗೆಳತಿಯರು ಸಾರಾಳ ಪುಸ್ತಕದ ಮೇಲೆ ತಮ್ಮ ಕೈಗಳಿಂದ ಸವರಿ ಕಣ್ಣುಮುಚ್ಚಿ ಖುಷಿಪಡುತ್ತಿದ್ದರು. ಕೆಲವರು ಹೆತ್ತವರಿಗೆ ಹೆದರಿ ಪುಸ್ತಕವನ್ನು ಮುಟ್ಟಲು ಭಯಪಡುತ್ತಿದ್ದರು.   

ಸಾರಾಳ ಧ್ವನಿಯಲ್ಲಿದ್ದ ಖಚಿತತೆ ಅವಳಿಗಿಂದು ನಿಜವೆನಿಸಿತು. ಈ ಕಟ್ಟುಪಾಡು, ಬಾಲ್ಯವಿವಾಹವನ್ನು ಹಿಂಸೆಯಾಗಿ ತೋರಿಸುತ್ತಿದ್ದ ಸಾರಾಳ ಸೌಭಾಗ್ಯ ನೆನೆದು ಈಕೆಯ ಕಣ್ಣಾಲಿಗಳು ಆ ಕ್ಷಣ ತುಂಬಿತು. ಸಾರಾಳನ್ನು ನೋಡಲೇಬೇಕೆಂಬ ಆಸೆಯ ತೀವ್ರತೆ ಹೆಚ್ಚಿ ಆಕೆ ಧೈರ್ಯದಿಂದ ಕತ್ತೆತ್ತಿ ಹುಡುಕಲು ಪ್ರಯತ್ನಿಸಿದಳು. ಆಗಲೇ ದೂರದಿಂದ ನಾಲ್ಕು ಕಣ್ಣುಗಳು ಈಕೆಯತ್ತ ತೀಕ್ಷ್ಣವಾಗಿ ದಿಟ್ಟಿಸಿ ನೋಡುತ್ತಿದ್ದವು.‌ ಇದೆಲ್ಲ ವಿಚಿತ್ರವೆನಿಸಿದರೂ ತಿರುಗಿ ಮತ್ತೊಮ್ಮೆ ಕತ್ತೆತ್ತಿ ನೋಡಲು ಧೈರ್ಯ ಮಾಡದೆ ಮೆಲ್ಲನೆ ತಲೆ ತಗ್ಗಿಸಿದಳು.

"ಮದುಮಗಳ ಕಿವಿಗೆ ಇನ್ನೂ ಓಲೆ ಸಿಕ್ಕಿಸಿಲ್ಲ. ಮದುಮಗನ ಹಿರಿಯಕ್ಕನನ್ನು ಕರೆಯಿರಿ. ಅವಳು ತೊಡಿಸುವುದೇ ನಮ್ಮ ಸಂಪ್ರದಾಯ. ನೀವು ಮುಟ್ಟಬೇಡಿ." ನಾಲ್ಕೈದು ಹೆಂಗಳೆಯರ ತಾಕೀತು ಮದುಮಗಳ ಅಮ್ಮನ ಮೇಲೆ ನಡೆಯುತ್ತಿತ್ತು. " ಇದ್ಯಾವ ಸಂಪ್ರದಾಯವೋ‌...ಅಲಿಕತ್ತು ಇಲ್ಲವೆನ್ನುತ್ತಾ ಅಲಿಕತ್ತು ಚುಚ್ಚಿಸಿಯಾಯಿತು. ಈಗ ಕಿವಿಗೆ ಓಲೆ ಧರಿಸುವ ಹೊಸ ನಾಟಕ.‌ ಇದನ್ನೆಲ್ಲ ಹೊತ್ತುಕೊಂಡು ನಾನು ಹೇಗೆ ನಡೆಯಲಿ. ಈಗಾಗಲೇ ಅಲಿಕತ್ತು ಚುಚ್ಚಿಸಿದ ನೋವು ಕಡಿಮೆಯಾಗಿಲ್ಲ. ಅದೂ ಅಲ್ಲದೆ ನನಗಾಗಿ ಹಗಲು ರಾತ್ರಿ ಕಷ್ಟಪಡುವ ನನ್ನಮ್ಮ ಮುಟ್ಟಬಾರದಂತೆ. ಅಮ್ಮನಿಗೆ ಗೌರವ ಕೊಡದ ಈ ಓಲೆ ತೊಡಿಸುವಿಕೆ ಇದ್ದರೇನು ಇಲ್ಲದಿದ್ದರೇನು..?" ಮೆಲ್ಲನೆ ಗೊಣಗಿಕೊಳ್ಳುತ್ತಾ ಬಂದ ಸಿಟ್ಟನ್ನು ನುಂಗಿಕೊಳ್ಳುತ್ತಾ, ಅನಿಷ್ಟ ಪದ್ಧತಿಗೆ ಹಿಡಿಶಾಪ ಹಾಕುತ್ತಾ, ನಿಟಿಕೆ ಮುರಿಯುತ್ತಾ ಅಮ್ಮನತ್ತ ದಿಟ್ಟಿಸಿದಳು. ಅಮ್ಮ ಕಣ್ಣುಸನ್ನೆಯಿಂದ ಮಗಳನ್ನು ಸಮಾಧಾನಪಡಿಸುತ್ತಾ ತಮ್ಮ ನೋವನ್ನು ನುಂಗಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರು.  

ಈ ಗಡಿಬಿಡಿಯ ನಡುವೆ ಮದುಮಗನ ಹಿರಿಯಕ್ಕನಿಗೊಂದು ಬುಲಾವ್. ಒಣ ಪ್ರತಿಷ್ಟೆ, ತೋರಿಕೆಯ ಗಾಂಭೀರ್ಯ, ಗಂಡಿನ ಅಕ್ಕನೆಂಬ ಜಂಭದೊಂದಿಗೆ ಅಮ್ಮನ ಕೈಯಿಂದ ಓಲೆಯನ್ನು ಕಿಸಕ್ಕನೆ ಕಿತ್ತು ಕಿವಿಗೆ ಚುಚ್ಚಲು ಅಣಿಯಾಗುತ್ತಿದ್ದ ದಢೂತಿ ಹೆಂಗಸಿನತ್ತ ನೋಡಿದವಳು ಸಣ್ಣಗೆ ಬೆವೆತಳು. ಅಪ್ಪ ಕಷ್ಡಪಟ್ಟು ದುಡಿದು ಮಾಡಿಸಿದ ಓಲೆಯನ್ನು ಆ ಹೆಂಗಸು ಸ್ವಲ್ಪವೂ ಸೌಜನ್ಯತೆ ತೋರಿಸದೆ ಕಿತ್ತೆಗೆಯುವಾಗ ಇವಳ ಕತ್ತನ್ನು ಎಳೆದಂತೆ ಭಾಸವಾಯಿತವಳಿಗೆ. ಸಣ್ಣ ವಯಸ್ಸು, ಈಗಷ್ಟೇ ಜಗತ್ತು ನೋಡುವ ಕಣ್ಣುಗಳು. ಆದರೆ ಪ್ರತಿಯೊಂದನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಆಕೆಯಲ್ಲಿತ್ತು. ಶಾಲೆಯ ಮೆಟ್ಟಿಲು ಹತ್ತದಿದ್ದರೂ ಅನ್ಯಾಯವನ್ನು ಅಸಹ್ಯಿಸಿಕೊಳ್ಳುವ ತೆಳು ದಿಟ್ಟತನವೂ ಇತ್ತು. ಅಲಿಕತ್ತಿನ ಭಾರದ ನೋವಿಗೆ ಓಲೆ ಧರಿಸದ ಅವಳ ಕಿವಿಯ ತೂತು ಮೊದಲಿನಷ್ಟು ಸಡಿಲವಾಗಿರಲಿಲ್ಲ. ಅಲ್ಪವೂ ನಾಜೂಕುತನ, ಕಾಳಜಿ ತೋರಿಸದೆ ಒಂದು ವಾರದಿಂದ ಓಲೆ ಧರಿಸದ ಕಿವಿಗೆ ಒಮ್ಮೆಲೆ ಕಿವಿಯೋಲೆ ಚುಚ್ಚಿಸಿದಾಗ ನೋವಿನಿಂದ ಸಣ್ಣಗೆ ಚೀರಿದಳು. ಕಣ್ಣಿನಲ್ಲಿ ನೀರು ಜಿನುಗಿತು.

"ಇದೇನು ಮಹಾ ನೋವು ಕಣೇ..ಹೆಣ್ಣಾಗಿ ಹುಟ್ಟಿದ ಮೇಲೆ ಎಲ್ಲಾ ನೋವುಗಳನ್ನು ಸಹಿಸಿಕೊಳ್ಳಬೇಕು. ಹೆಣ್ಣು ಹುಟ್ಟಿದ್ದೇ ನೋವು ತಿನ್ನಲು. ಹೀಗೆ ಸಣ್ಣಪುಟ್ಟ ನೋವಿಗೆ ಚೀರಿದರೆ ಹೇಗೆ ? " ಆ ಹೆಂಗಸಿನ ಜೋರುಧ್ವನಿಗೆ ಇವಳು ಮತ್ತಷ್ಟು ಬೆವೆತು ಗುಬ್ಬಚ್ಚಿಯಾದಳು.
' ಹೆಣ್ಣೆಂದರೆ ಇಷ್ಟು ತಾತ್ಸಾರವೇ...ಹೆಣ್ಣಾಗಿ ಹುಟ್ಟಿದ್ದು ನನ್ನ ತಪ್ಪೇ...ಹುಟ್ಟಿದ ತಕ್ಷಣ ನೋವು ತಿನ್ನಬೇಕೆಂಬ ನಿಯಮವಿದೆಯೇ? ಗಂಡಿಗೆ ಯಾಕೆ ಇಂತಹ ಪದ್ಧತಿಗಳಿಲ್ಲ. ಸಾರಾ ಹೇಳಿದ ಹಾಗೆ ಬರೀ ಹೆಣ್ಣಿನ ಮೇಲೆ ಯಾಕಿವರು ಹೇರುತ್ತಿದ್ದಾರೆ?' ಅಪ್ಪ ಮತ್ತು ಅಜ್ಜಿಯನ್ನು ಎದುರು ಹಾಕುವ ಧೈರ್ಯ ಸಾಕಾಗದೆ ಅದೆಲ್ಲವನ್ನು ಅಮ್ಮನ ಮೇಲೆ ತೋರಿಸುತ್ತಿದ್ದಳು. ಈ ಮದುವೆಯ ಮೇಲಿನ ಅಸಹನೆಯನ್ನು ಕೂಡ ಅಮ್ಮನಲ್ಲಿ ಹಲವಾರು ಬಾರಿ ಆಕ್ಷೇಪಿಸಿದ್ದಳು. ಇದೀಗ ಈ ವಲ್ಲಿ, ಅಲಿಕತ್ತು, ಕಿವಿಯೋಲೆ ತೊಡಿಸುವುದು, ಕೊನೆ ಗಳಿಗೆಯಲ್ಲಿ ಒಪ್ಪಿಗೆ ಕೇಳುವ ನಾಟಕದ ಆಟ. ಇದೆಲ್ಲವು ಇವಳಿಗೆ ತಲೆಚಿಟ್ಟು ಹಿಡಿಸುವಂತಿತ್ತು. ಗೊತ್ತುಗುರಿಯಿಲ್ಲದ ಪಯಣ, ಮನೆಯವರಿಂದ ದೂರವಾಗುವ ಅಗಲುವಿಕೆ, ಈಗಾಗಲೇ ದರ್ಪದ ಹೊಸಮುಖಗಳ ದರ್ಶನ. ಇದರ ಜೊತೆ ತಲೆ, ಕಿವಿ, ಮೈ ಭಾರದ ನೋವಿನ ಮದುಮಗಳ ಪಟ್ಟದ ಅಸಹನೆಯೊಂದಿಗೆ ತುಟಿಯನ್ನು ಅವುಡುಗಚ್ಚಿ ಉಕ್ಕಿ ಬರುತ್ತಿದ್ದ ಕಣ್ಣೀರನ್ನು ಪುಟ್ಟ ಕೈಗಳಿಂದ ಒರೆಸಿದಳು.

- ಮುಂದುವರಿಯುವುದು
- ಸಿಹಾನ ಬಿ.ಎಂ.

© Copyright 2022, All Rights Reserved Kannada One News