ಅಕ್ಕ ಸಿಕ್ಕಿದ್ದಳು...!: ರತ್ನಾಕರ.ಸಿ.ಕುನುಗೋಡು ಅವರ ಕವಿತೆ

ಅಕ್ಕ ಸಿಕ್ಕಿದ್ದಳು...!: ರತ್ನಾಕರ.ಸಿ.ಕುನುಗೋಡು ಅವರ ಕವಿತೆ

Updated : 31.07.2022

ಇಂದು ಮುಂಜಾನೆ
ಅಪರೂಪಕ್ಕೆ
ವಾಯುವಿಹಾರಕ್ಕೆ ಹೊರಟಿದ್ದೆ
ದಾರಿಯ ತಿರುವಲಿ
ಕೆರೆ ಏರಿಯ ಅಂಚಲಿ
ನೀರಲಿ ಕಾಲನು ಇಳಿಬಿಟ್ಟು
ಹಂಸಗಳೊಂದಿಗೆ ಆಡುತಲಿದ್ದ
ನೀರೆಯ ಕಂಡು ನಿಂತೆ ಅರೆಕ್ಷಣ

ನಾ ಬಂದ ಕುರುಹನು
 ಹೇಗೊ ಅರಿತು
 ಎದ್ದು ಎದುರಾದಳು
  ಅರೆ..!
  ಅಕ್ಕಾ!...!!?

 ಮಾತೀಗ ಮೈಲಿಗೆ
 ಎನ್ನುವಂತಿತ್ತು ಮುಖಭಾವ
 ಸುಮ್ಮನೆ ದಂಡೆಯುದ್ದಕ್ಕೂ ಹೆಜ್ಜೆಹಾಕಿದೆವು
 ಯುಗ ಯುಗಗಳು ಕಾಲಡಿಯಲಿ ಕರಗುತಿದ್ದವು
 ಉಡುತಡಿ ಕಲ್ಯಾಣ ಶ್ರೀಶೈಲದ ಪಯಣ
 ಕೌಶಿಕ ಬೊಮ್ಮಯ್ಯ ಅಲ್ಲಮ ಬಸವಣ್ಣ
 ಅನುಭವಮಂಟಪ ಸತ್ಸಂಗ ವಚನ
ನಿನ್ನ ನಿಜನಲ್ಲ ಚೆನ್ನಮಲ್ಲಿಕಾರ್ಜುನ...
ಎದೆಗೊದೆಯುತಿದ್ದ ನೂರು ಕೌತುಕಗಳು
ಅವಳ ತಿಳಿಮೌನದೆದುರು ತಳಮಳಗೊಂಡವು!

 ಕೆರೆ ಸೆರಗಿನ ಕಿರುಬಂಡೆಯನೇರಿ
 ಕೈಯೂರಿ ಕುಳಿತಳು ಶಿವಸಖಿ
 ಮೂಡಣಕೆ ಮುಖವೊಡ್ಡಿ
 ಬಾಲಸೂರ್ಯನವಳ ಮುಖ ಬೆಳಗುತಿದ್ದ
 ಎಳೆಗಾಳಿ ಕೇಶಾಂಬರವನು ತೀಡುತಿತ್ತು
 ಕಣ್ಣಿನಲಿ ಶೂನ್ಯವನು ಸೆರೆಹಿಡಿದು
 ತೋಳಲಿ ಬಯಲನು ಬರಸೆಳೆದು
 ದೇಹಾತ್ಮ ಮನವನು ಹೊಸೆದು
 ಬೆಳಗನುಟ್ಟ ದೀಪದಮಲ್ಲಿ
 ಎದೆತುಂಬಿ ಹಾಡಿದಳು
 ಅನು-ಭಾವಗೀತೆ
 ಕಾಲ-ದೇಶವ ಮೀರಿ ಮೈಮರತೆ...!

 ಕೈಹಿಡಿದು ಎಚ್ಚರಿಸಿ
 ಪಕ್ಕಕ್ಕೆಳೆದು ಕೂರಿಸಿಕೊಂಡಳು
  ಇವ ನಮ್ಮವನೆಂಬಂತೆ
 ಸಲುಗೆಯ ಮೆಲುದನಿಯಲಿ ಕೇಳಿದೆ;
 ಸಿಗಲಿಲ್ಲವೆ ಚನ್ನ?
 ಸೇರಲಿಲ್ಲವೆ ಅವನ??
 ತೊರೆದೆಯೇಕೆ ಕದಳಿವನ???.

 ಮುಗುಳುನಗೆ ಮೂಡಿ
 ವಿಷಾಧದಲಿ ಬಾಡಿತು

 ಸಿಕ್ಕರೆ ಮುಕ್ಕಾಗುವುದು ಶೋಧನೆ
 ಸೇರಿದರೆ ಶರಣಾಗುವುದು ಸಾಧನೆ
 ತೃಪ್ತಿಗೊಂಡರೆ ತಟಸ್ಥವಾಗುವುದು ಚಲನೆ    
 ಸುಲಿಸುಲಿಯುತ್ತಾ ಬಾಳೆ
 ತಾನೇ ಬರಿದಾಯಿತು ನೋಡಾ...
 ತುದಿಮೊದಲಿಲ್ಲದ ಅನಂತ ಬಯಲೆಡೆಗೆ
 ತಲೆ ಬುಡವಿಲ್ಲದ ಅಗಮ್ಯ ಐಕ್ಯದೆಡೆಗೆ
 ಅಗಣಿತ ಬೆತ್ತಲೆ ಹೆಜ್ಜೆಗಳನಿಡುತಿಹೆನು ಕಾಣಾ...

 ಇನ್ನೊಮ್ಮೆ ಸಿಗೋಣವೆಂದು
 ಬೆನ್ನುತಟ್ಟಿ ಮೇಲಕ್ಕೆದ್ದಳು  
 ನೆಲ ನೀರು ಬಾನು ಸಂಧಿಸುವ ದಿಕ್ಕಿನತ್ತ
 ದಿಟ್ಟಿನೆಟ್ಟು ನಡೆಯತೊಡಗಿದಳು ಗಟ್ಟಿಗಿತ್ತಿ...
 ಮಿಕ್ಕು ಮೀರಿ ಹೋಗುವವಳ
 ಬೆಂಬತ್ತುವುದು ತರವಲ್ಲವೆಂದು
 ತಿರು ತಿರುಗಿ ನೋಡುತ್ತಾ ಹಿಂತಿರುಗಿದೆ

ಮತ್ತೆಂದು ಸಿಗುವಳೋ
ಅಲೆಮಾರಿ ಅಕ್ಕಾ...!

-ರತ್ನಾಕರ.ಸಿ.ಕುನುಗೋಡು

© Copyright 2022, All Rights Reserved Kannada One News