ನ.3ರಿಂದ ಕೃಷಿ ಮೇಳ: ಒಂಬತ್ತು ಹೊಸ ಸುಧಾರಿತ ತಳಿಗಳ ಬಿಡುಗಡೆ

ನ.3ರಿಂದ ಕೃಷಿ ಮೇಳ: ಒಂಬತ್ತು ಹೊಸ ಸುಧಾರಿತ ತಳಿಗಳ ಬಿಡುಗಡೆ

Updated : 29.10.2022

ಜಿಕೆವಿಕೆ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆವರಣದಲ್ಲಿ ನವೆಂಬರ್‌ 3ರಿಂದ ಕೃಷಿ ಮೇಳ ಆಯೋಜನೆಗೊಂಡಿದ್ದು, ಆಹಾರ, ವಾಣಿಜ್ಯ, ಮೇವು ಮೇಳ ಹಾಗೂ ರೈತರ ಅನುಕೂಲಕ್ಕಾಗಿ ಅಭಿವೃದ್ಧಿಪಡಿಸಿರುವ ಒಂಬತ್ತು ಹೊಸ ಸುಧಾರಿತ ತಳಿಗಳ ಬಿಡುಗಡೆ ಕಾರ್ಯಕ್ರಮ ನೆರವೇರಲಿದೆ.

ಸುಧಾರಿತ ಈ ತಳಿಗಳು ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದ್ದು, ಅಧಿಕ ಇಳುವರಿ ನೀಡುತ್ತವೆ. ಮುಸುಕಿನ ಜೋಳ, ಹರಳು,  ಭತ್ತ, ಅವರೆ, ಕೊರಲೆ, ಎಳ್ಳು, ಹುಚ್ಚೆಳ್ಳು, ಮೇವಿನ ಜೋಳ ಸೇರಿದಂತೆ ಅಭಿವೃದ್ಧಿಪಡಿಸಿರುವ ಹೊಸ ತಳಿಗಳನ್ನು ರೈತರ ಬಳಕೆಗೆ ಮುಕ್ತಗೊಳಿಸಲಾಗುತ್ತದೆ.

ನೂತನ ತಳಿಗಳ ವಿವರ ಹೀಗಿದೆ

ಭತ್ತ: (ಕೆಎಂಪಿ-225)

ಅಲ್ವಾವಧಿಯಲ್ಲಿ ಬೆಳೆಯುವ ಈ ಸುಧಾರಿತ ತಳಿಯಲ್ಲಿ ಬರುವ ಅಕ್ಕಿ ಬಿಳಿ ಬಣ್ಣದಿಂದ ಕೂಡಿರುತ್ತದೆ. ಬಿತ್ತನೆಯಾಗಿ 125 ದಿನ ಕಳೆದರೆ ಸಾಕು ಕಟಾವಿಗೆ ಬರುವಂತದ್ದಾಗಿದ್ದು, ತಿ ಎಕರೆಗೆ 24ರಿಂದ 26 ಕ್ವಿಂಟಾಲ್ ಇಳುವರಿ ಸಿಗುತ್ತದೆ. ಇದರ ಅಕ್ಕಿ ದಪ್ಪ ಮತ್ತು ಉದ್ದ ಬರುವುದಲ್ಲದೆ, ಭತ್ತವನ್ನು ಕಾಡುವ ಬೆಂಕಿರೋಗವನ್ನು ಎದುರಿಸುವ ರೋಗ ನಿರೋಧಕ ಶಕ್ತಿ ಹೆಚ್ಚಿದೆ.

ಸಣ್ಣ ಅಕ್ಕಿಯ ಸುಧಾರಿತ ಭತ್ತ (ಆರ್‌ಎನ್‌ಆರ್‌ 15048)

ಇದು ಕೂಡ 125 ದಿನಗಳಿಗೆ ಕಟಾವಿಗೆ ಬರುವ ಅಲ್ಪಾವಧಿ ತಳಿಯಾಗಿದ್ದು, ಜುಲೈ 3ನೇ ವಾರದಿಂದ ನಾಲ್ಕನೇ ವಾರದೊಳಗೆ ಇದನ್ನು ಬಿತ್ತನೆ ಮಾಡಬಹುದು. ಪ್ರತಿ ಎಕರೆಗೆ 22ರಿಂದ 24 ಕ್ವಿಂಟಾಲ್ ಇಳುವರಿ ನೀಡುವ ಈ ಚಿಕ್ಕ ಅಕ್ಕಿ, ಉತ್ತಮ ದರ್ಜೆಯದ್ದಾಗಿದೆ.

ಸಿಎನ್‌ಎಸ್‌ಎಸ್‌-1 ಎನ್ನುವ ಹೊಸ ಮೇವಿನ ಜೋಳವನ್ನು ಜಿಕೆವಿಕೆ ತಂಡ ಅಭಿವೃದ್ಧಿಪಡಿಸಿದ್ದು, ಮಳೆಯಾತ್ರಿತ ಸಂದರ್ಭದಲ್ಲಿ ಬಿತ್ತನೆಗೆ ಸೂಕ್ತವಾಗಿದೆ. ಪ್ರತಿ ಎಕರೆಗೆ 22-23 ಟನ್‌ ಹಸಿರು ಮೇವು ಸಿಗುತ್ತದೆ. ಅಲ್ಲದೆ, ಉತ್ತಮ ಗುಣಮಟ್ಟದ ನಾರಿನಾಂಶ, ಸಾರಜನಕ ಹೆಚ್ಚಿರುತ್ತದೆ.

ಇದೇ ರೀತಿಯಲ್ಲಿ ಎಂಎಎಚ್‌- 14-138 ಹೆಸರಿನ ಮುಸುಕಿನ ಜೋಳ, ಕೆಬಿಎಸ್-2 ಎನ್ನುವ ಹುಚ್ಚೆಳ್ಳು, ಜಿಕೆವಿಕೆಎಸ್-1 ಎನ್ನುವ ಎಳ್ಳು, ಜಿಪಿಯುಬಿಟಿ-2 ಎಂಬ ಕೊರಲೆ ಹಾಗೂ ಎಚ್‌ಎ-5 ಎನ್ನುವ ಅವರೆಯನ್ನು ಅಭಿವೃದ್ಧಿಪಡಿಸಲಾಗಿತ್ತು. ಇವುಗಳ ಬಿತ್ತನೆಯಿಂದ ರೈತರು ಉತ್ತಮ ಇಳುವರಿ ಪಡೆಯಬಹುದು ಎಂದು ಜಿಕೆವಿಕೆ ಕೃಷಿ ವಿಶ್ವವಿದ್ಯಾನಿಲಯದ ತಜ್ಞರು ಹೇಳಿದ್ದಾರೆ.

© Copyright 2022, All Rights Reserved Kannada One News