ಚಿಕಿತ್ಸೆ ಸಿಗದೆ ಬಾಣಂತಿ-ಹಸುಗೂಸು ಮರಣ ಪ್ರಕರಣ: ಓರ್ವ ವೈದ್ಯೆ, 3 ದಾದಿಯರ ಅಮಾನತು

ಚಿಕಿತ್ಸೆ ಸಿಗದೆ ಬಾಣಂತಿ-ಹಸುಗೂಸು ಮರಣ ಪ್ರಕರಣ: ಓರ್ವ ವೈದ್ಯೆ, 3 ದಾದಿಯರ ಅಮಾನತು

Updated : 04.11.2022

ಬೆಂಗಳೂರು: ಸಕಾಲದಲ್ಲಿ ತುರ್ತು ಚಿಕಿತ್ಸೆ ಸಿಗದೆ ತುಂಬು ಗರ್ಭಿಣಿ ಹಾಗೂ ಆಕೆಯ ನವಜಾತ ಅವಳಿ ಶಿಶುಗಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿ ತುಮಕೂರು ಜಿಲ್ಲಾಸ್ಪತ್ರೆಯ ಓರ್ವ ತಜ್ಞವೈದ್ಯೆ ಹಾಗೂ ಮೂವರು ದಾದಿಯರನ್ನು ಅಮಾನತುಗೊಳಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ.

ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ರಾಜ್ಯ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಮೇಲ್ನೋಟಕ್ಕೆ ಹೆರಿಗೆ ವಾರ್ಡ್ ನ ಮೂವರು ದಾದಿಯರು ಹಾಗೂ ಕರ್ತವ್ಯ ನಿರತ ವೈದ್ಯರ ಕರ್ತವ್ಯಲೋಪ ಕಂಡುಬಂದಿದ್ದು, ತನಿಖೆಗೆ ಆದೇಶ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ನಾಲ್ವರನ್ನೂ ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಈ ಘಟನೆಯನ್ನು ಸರ್ಕಾರ ಹಾಗೂ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಘಟನೆಯ ಕುರಿತು ತನಿಖೆ ನಡೆಸಲು ಆರೋಗ್ಯ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ. ಈ ಸಮಿತಿಗೆ ಇನ್ನೆರಡು ವಾರಗಳಲ್ಲಿ ವರದಿ ನೀಡುವಂತೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

ತುರ್ತು ಪರಿಸ್ಥಿತಿಯಲ್ಲಿ ರೋಗಿಯ ನೋವು, ಸಂಕಟವನ್ನು ನಿವಾರಿಸುವುದು ವೈದ್ಯರ, ಶುಶ್ರೂಷಕರ ಮತ್ತು ಇತರೆ ಸಿಬ್ಬಂದಿ ವರ್ಗದವರ ಆದ್ಯ ಕರ್ತವ್ಯವಾಗಿದೆ ಹಾಗೂ ತುರ್ತು ಪರಿಸ್ಥಿತಿಯಲ್ಲಿ ರೋಗಿಯ ಯಾವುದೇ ದಾಖಲಾತಿಗಳನ್ನು ನೀಡಲು ಒತ್ತಾಯಿಸಬಾರದು ಎಂದು ಈಗಾಗಲೇ ಸರ್ಕಾರದ ಆದೇಶವಿದ್ದು, ಮತ್ತೊಮ್ಮೆ ಅದೇಶವನ್ನು ಪ್ರಕಟಿಸಲಾಗಿದೆ.

ತನಿಖೆಯ ವರದಿಯಲ್ಲಿ ಆರೋಪ ಸಾಬೀತಾದರೆ ಅಮಾನತುಗೊಂಡಿರುವ ಸಿಬ್ಬಂದಿಯನ್ನು ಸೇವೆಯಿಂದ ವಜಾಗೊಳಿಸುವುದಲ್ಲದೆ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಈ ರೀತಿಯ ಘಟನೆ ಮತ್ತೆ ಮರುಕಳಿಸದಂತೆ ಮುನ್ನಚ್ಚರಿಕೆ‌ ತೆಗೆದುಕೊಳ್ಳುವಂತೆ ಎಲ್ಲಾ ಆರೋಗ್ಯಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಮಾಡಲಾಗಿದೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

© Copyright 2022, All Rights Reserved Kannada One News