ಕರವೇಗೆ 1ಕೋಟಿ, ವಾಟಾಳ್‌ರ ರಾಜ್ಯೋತ್ಸವ ಸಮಿತಿಗೆ 75 ಲಕ್ಷ ರೂ.ಮಂಜೂರು; ಸಚಿವರ ಸೂಚನೆ ಉಲ್ಲಂಘನೆ?

Related Articles

ಮಲ್ಲಿಕಾರ್ಜುನ ಖರ್ಗೆಗೆ ಒಲಿಯುತ್ತಾ ಕಾಂಗ್ರೆಸ್ ಅಧ್ಯಕ್ಷ ಪಟ್ಟ?

‘ಪೇ ಟಿಎಂ ಅಲ್ಲ ಪೇ ಸಿಎಂ’: ಇದು ಬಿಜೆಪಿ ಭ್ರಷ್ಟಾಚಾರದ ಜಾಹೀರಾತು

ದಲಿತ ಸೊಸೆಯನ್ನು ಮನೆಗೆ ಸೇರಿಸದ ಕುಟುಂಬ: ಮಗುವಿನೊಂದಿಗೆ ಧರಣಿ ಕುಳಿತ ಮಹಿಳೆ

ಮೂಡಿಗೆರೆ ಮಾಯಾವಿ ಪೂರ್ಣಚಂದ್ರ ತೇಜಸ್ವಿ ಅವರ ಕರ್ವಾಲೋ ಕಾದಂಬರಿ ಕುರಿತು ಪಿ. ಲಂಕೇಶರ ಮಾತು

‘ಸಚಿವರು ಕಾಣೆಯಾಗಿದ್ದಾರೆ! ಹುಡುಕಿಕೊಡಿ...

ಗೌರಿಯನ್ನು ಕೊಂದವರು ಜೈಲಿನಲ್ಲಿದ್ದಾರೆ, ಕೊಲ್ಲಿಸಿದವರು ಅಧಿಕಾರದಲ್ಲಿದ್ದಾರೆ: ನಟ ಪ್ರಕಾಶ್ ರಾಜ್

ನಾ ಕಂಡ ಹಾಗೆ 'ಗೌರಿ' ಅಮ್ಮ: ವಿಕಾಸ್ ಆರ್ ಮೌರ್ಯ ಅವರ ಲೇಖನ

ಗೌರಿಯ ಅಕ್ಷರಗಳು ಮಾತು ಚಟುವಟಿಕೆ ಎಲ್ಲವೂ ನಿರ್ಭಯ ಭಾರತ ನಿರ್ಮಾಣದ ಗುರಿ ಹೊಂದಿತ್ತು: ಕೆ. ನೀಲಾ ಅವರ ಲೇಖನ

ನನ್ನಕ್ಕ ಗೌರಿ ಲಂಕೇಶ್, ನಾನು ಲಂಕೇಶ್! -ಅಪ್ಪಗೆರೆ ಲಂಕೇಶ್ ಅವರ ಲೇಖನ

ಗೌರಿ ಲಂಕೇಶ್ ವ್ಯಕ್ತಿತ್ವದ ಭಿನ್ನ ಆಯಾಮಗಳು: ಹುಲಿಕುಂಟೆ ಮೂರ್ತಿ ಅವರ ಲೇಖನ

ಕರವೇಗೆ 1ಕೋಟಿ, ವಾಟಾಳ್‌ರ ರಾಜ್ಯೋತ್ಸವ ಸಮಿತಿಗೆ 75 ಲಕ್ಷ ರೂ.ಮಂಜೂರು; ಸಚಿವರ ಸೂಚನೆ ಉಲ್ಲಂಘನೆ?

Updated : 20.08.2022

-ಜಿ.ಮಹಂತೇಶ್

ಬೆಂಗಳೂರು; ಕರ್ನಾಟಕ ರಕ್ಷಣಾ ವೇದಿಕೆಯ ಬೆಳ್ಳಿ ಹಬ್ಬದ ಹೆಸರಿನಲ್ಲಿ ಕರ್ನಾಟಕ ಸಾಂಸ್ಕೃತಿಕ ಸಮಾವೇಶಕ್ಕೆ ಮತ್ತು ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಅಧ್ಯಕ್ಷರಾಗಿರುವ ಕರ್ನಾಟಕ ರಾಜ್ಯೋತ್ಸವ ಸಮಿತಿಯು 59ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲು  ರಾಜ್ಯ ಬಿಜೆಪಿ ಸರ್ಕಾರವು 1.75 ಕೋಟಿ ರು.ಗಳನ್ನು ಮಂಜೂರು ಮಾಡಿದೆ.

ಅನುದಾನದ ಮೊತ್ತವನ್ನು ಗರಿಷ್ಠ 2. 5 ಲಕ್ಷ ರೂ.ಗೆ ಸೀಮಿತಗೊಳಿಸಲಾಗಿದೆ ಎಂದು ಸಚಿವ ವಿ ಸುನೀಲ್‌ ಕುಮಾರ್‌ ಅವರು 2022ರ ಮಾರ್ಚ್‌ನಲ್ಲಿ ಹೇಳಿಕೆ ನೀಡಿದ್ದರು. ಆದರೀಗ ಮೂರೇ ಮೂರು ತಿಂಗಳ ಅಂತರದಲ್ಲೇ ಕರ್ನಾಟಕ ರಕ್ಷಣಾ ವೇದಿಕೆಗೆ 1 ಕೋಟಿ ರು., ವಾಟಾಳ್‌ ನಾಗರಾಜ್‌ ಅಧ್ಯಕ್ಷತೆಯ ಕರ್ನಾಟಕ ರಾಜ್ಯೋತ್ಸವ ಸಮಿತಿಗೆ 75 ಲಕ್ಷ ರು.ಗಳನ್ನು ಬಿಡುಗಡೆ ಮಾಡಲು ಹೊರಡಿಸಿರುವ ಆದೇಶವು ಮುನ್ನೆಲೆಗೆ ಬಂದಿದೆ. ಅನುದಾನ ಬಿಡುಗಡೆ ಸಂಬಂಧ ಅಧಿಕಾರಿಗಳು ಸಚಿವರ ಸೂಚನೆಯನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಟಿ ನಾರಾಯಣಗೌಡ ಅವರ ಅಧ್ಯಕ್ಷತೆಯಲ್ಲಿರುವ ಕರ್ನಾಟಕ ರಕ್ಷಣಾ ವೇದಿಕೆಯ ‘ಕರವೇ-25 ಬೆಳ್ಳಿ ಹಬ್ಬ ಮತ್ತು ಕರ್ನಾಟಕ ಸಾಂಸ್ಕೃತಿಕ ಸಮಾವೇಶಕ್ಕೆ 1.00 ಕೋಟಿ ರು.ಗಳನ್ನು ಮಂಜೂರು ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದ್ದರು. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಒಂದು ಕೋಟಿ ರು.ಗಳನ್ನು ಬಿಡುಗಡೆ ಮಾಡಿ 2022ರ ಜುಲೈ 30ರಂದು ಆದೇಶ ಹೊರಡಿಸಿದೆ.

ಕರ್ನಾಟಕ ರಕ್ಷಣಾ ವೇದಿಕೆಗೆ ಕನ್ನಡ ಸಂಸ್ಕೃತಿ ಇಲಾಖೆಯು  1.00 ಕೋಟಿ ರು. ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ. ಕರ್ನಾಟಕ ರಕ್ಷಣಾ ವೇದಿಕೆಯ ಕರವೇ-25 ಬೆಳ್ಳಿ ಹಬ್ಬ, ಕರ್ನಾಟಕ ಸಾಂಸ್ಕೃತಿಕ ಸಮಾವೇಶದ ಅಂಗವಾಗಿ ರಾಜ್ಯಾದ್ಯಂತ ಕರ್ನಾಟಕ ಸಾಂಸ್ಕೃತಿಕ ಸಮಾವೇಶ ಕಾರ್ಯಕ್ರಮದಡಿ ವರ್ಷಪೂರ್ತಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮುಖ್ಯಮಂತ್ರಿಗೆ ಕರವೇ ಸಲ್ಲಿಸಿದ್ದ ಮನವಿಯಿಂದ ತಿಳಿದು ಬಂದಿದೆ.

‘2022-23ನೇ ಸಾಲಿನ ಧನಸಹಾಯಕ್ಕಾಗಿ ಸೇವಾ ಸಿಂಧುವಿನಲ್ಲಿ ಅರ್ಜಿ ಆಹ್ವಾನಿಸಲಾಗಿದ್ದು ಈ ಲೆಕ್ಕ ಶೀರ್ಷಿಕೆ (2205-00-102–1-64-059) ಯಡಿ ಅನುದಾನ ಬಿಡುಗಡೆ ಮಾಡಿದಲ್ಲಿ ಸೇವಾ ಸಿಂಧುವಿನಲ್ಲಿ ಅರ್ಜಿ ಸಲ್ಲಿಸುವ ಅರ್ಹ ತಂಡಗಳಿಗೆ ಅನುದಾನ ನೀಡಲು ಕೊರತೆಯಾಗುವ ಸಂಭವವಿರುವುದರಿಂದ ಈ ಲೆಕ್ಕ ಶೀರ್ಷಿಕೆಯಡಿ 1.00 ಕೋಟಿ ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿ ಆದೇಶ ಹೊರಡಿಸಬೇಕು,’ ಎಂದೂ ಕರವೇ ಕೋರಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.

ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಅವರು 2020ರಲ್ಲಿಯೂ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮುಂದಾಗಿದ್ದ ವೇಳೆಯಲ್ಲಿ ಹಿಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಅನುದಾನ ನೀಡಿರಲಿಲ್ಲ. ಆದರೀಗ ಕರ್ನಾಟಕ ರಾಜ್ಯೋತ್ಸವ ಸಮಿತಿ ಸಲ್ಲಿಸಿರುವ ಪ್ರಸ್ತಾವನೆಯನ್ನು ಪುರಸ್ಕರಿಸಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶೇಷ ಪ್ರಕರಣವೆಂದು ಪರಿಗಣಿಸಿ 75.00 ಲಕ್ಷ ರು.ಗಳನ್ನು ಮಂಜೂರು ಮಾಡಲು ಸೂಚಿಸಿದ್ದರು ಅದರಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು 2022ರ ಜೂನ್‌ 4ರಂದೇ ಆದೇಶ ಹೊರಡಿಸಿದೆ.

2021-22ನೇ ಸಾಲಿನಲ್ಲಿ 59ನೇ ವರ್ಷದ ಕರ್ನಾಟಕ ರಾಜ್ಯೋತ್ಸವವನ್ನು ವಿಶೇಷವಾಗಿ ಕರ್ನಾಟಕ ರಾಜಧಾನಿ ಬೆಂಗಳೂರಿನಲ್ಲಿ ಸುಮಾರು 15 ಸಾಂಸ್ಕೃತಿಕ ಮೆರವಣಿಗೆಗಳನ್ನು ನಡೆಸಲು ಉದ್ದೇಶಿಸಿದೆ. ಈ ಕಾರ್ಯಕ್ರಮಕ್ಕೆ ಇಲಾಖೆಯಿಂದ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಬೇಕು ಎಂದು ಸಮಿತಿಯ ಅಧ್ಯಕ್ಷ ಮಾಜಿ ಶಾಸಕ ವಾಟಾಳ್‌ ನಾಗರಾಜ್‌ ಅವರು ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದರು ಎಂಬುದು ಆದೇಶದಿಂದ ತಿಳಿದು ಬಂದಿದೆ.

’59ನೇ ವರ್ಷದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ 75.00 ಲಕ್ಷ ರು.ಗಳನ್ನು ಕರ್ನಾಟಕ ರಾಜ್ಯೋತ್ಸವ ಸಮಿತಿಯ ಪದಾಧಿಕಾರಿಗೆ ಬಿಡುಗಡೆ ಮಾಡಲು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿದೆ,’ ಎಂದು ಕನ್ನಡ ಸಂಸ್ಕೃತಿ ಇಲಾಖೆಯು ಆದೇಶದಲ್ಲಿ ತಿಳಿಸಿದೆ.


‘ಸರ್ಕಾರದ ಅನುದಾನ ಮದುವೆ, ಪ್ರೇಮ ವಿವಾಹಕ್ಕಲ್ಲ. ಕನ್ನಡ ರಾಜ್ಯೋತ್ಸವ ಆಚರಿಸಲು ಅನುದಾನ ಕೊಡ್ತಾರೆ. ಸಿಎಂ ಬಿಎಸ್‌ವೈ ಅನುದಾನ ಕೊಡಿ ಅಂದ್ರೆ ಕೊಡಲಿಲ್ಲ. ಬಿಎಸ್‌ವೈ ಸರ್ಕಾರದಿಂದ ಅನುದಾನ ತೆಗೆದುಕೊಂಡಿಲ್ಲ. ಆದರೆ, ಅವರು ಅನುದಾನ ಕೊಟ್ಟಿಲ್ಲವೆಂದು ಆಚರಣೆ ನಿಲ್ಲಿಸಿಲ್ಲ ಎಂದು ಕನ್ನಡ ಸಂಘಟನೆಗಳಿಗೆ ಸರ್ಕಾರ ಅನುದಾನ ನೀಡದ ವಿಚಾರವಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಿಡಿಕಾರಿದ್ದರು.

ಯಡಿಯೂರಪ್ಪನವರೇ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದೀರಾ ? ಎಂದು ಸಹ ಪ್ರಶ್ನಿಸಿದ್ದ ವಾಟಾಳ್ ನಾಗರಾಜ್‌,  ಅವರು ಅನುದಾನ ನೀಡದಿರುವುದಕ್ಕೆ ದ್ವೇಷವೇ ಕಾರಣ. ಸಿಎಂ ಯಡಿಯೂರಪ್ಪಗೆ ನನ್ನ ಮೇಲೆ ದ್ವೇಷವಿದೆ ಎಂದು  ಹೇಳಿಕೆ ನೀಡಿದ್ದರು.

‘ಅನುದಾನ ಪಡೆಯುವಲ್ಲಿ ಕೆಲವೇ ಸಂಘ ಸಂಸ್ಥೆಗಳು ಏಕಸ್ವಾಮ್ಯ ಸಾಧಿಸಿವೆ. ಇಲಾಖೆಯ ಅಧಿಕಾರಿಗಳು ಇದರಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದು ಹಲವಾರು ದೂರುಗಳು ಬಂದ ಹಿನ್ನೆಲೆಯಲ್ಲಿ ಅನುದಾನ ಕಡಿತಗೊಳಿಸುವ ಕ್ರಮ ಕೈಗೊಂಡಿತ್ತು. ಹತ್ತಾರು ವರ್ಷಗಳಿಂದ 10 ರಿಂದ 15 ಲಕ್ಷ ರೂಪಾಯಿ ವರೆಗೆ ಅನುದಾನ ಪಡೆಯುತ್ತಲೇ ಬಂದ ಸಂಸ್ಥೆಗಳಿಗೆ ಈ ಬಾರಿ ನೆರವು ಕಡಿತ ಮಾಡಲಾಗಿದೆ,’ ಎಂದು ಸಚಿವ ಸುನೀಲ್‌ ಕುಮಾರ್‌ ಅವರು ಹೇಳಿಕೆ ನೀಡಿದ್ದನ್ನು ಸ್ಮರಿಸಬಹುದು.

ಅನುದಾನಕ್ಕಾಗಿ ಸಾಂಸ್ಕೃತಿಕ ಮಾಫಿಯಾ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ ಎಂಬ ಆರೋಪ ಕೇಳಿ ಬರುತ್ತಲೇ ಇದೆ. ಪ್ರಭಾವಿಗಳ ಸಂಪರ್ಕ, ಲೆಟರ್ ಹೆಡ್ ಸಂಘಟನೆ ಹೊಂದಿದ್ದ ಕೆಲ ಪಟ್ಟಭದ್ರರು ವಾರ್ಷಿಕ 25 ರಿಂದ 50 ಲಕ್ಷ ರೂ. ಅನುದಾನ ಪಡೆದಿರುವ ಬಗ್ಗೆ ಸಾರ್ವಜನಿಕ ವೇದಿಕೆಗಳಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಲೇ ಇವೆ. ಕೊರೋನಾ ಅವಧಿಯ ಎರಡು ವರ್ಷ ಯಾವುದೇ ಕಾರ್ಯಕ್ರಮ ಆಯೋಜಿಸದೇ ಅನುದಾನ ಪಡೆಯುವ ಬಗ್ಗೆ ಕೆಲ ಸಂಘಟನೆಗಳು ಪ್ರಯತ್ನ ನಡೆಸಿರುವುದು ಪರಿಶೀಲನೆ ಸಂದರ್ಭದಲ್ಲಿ ಬಯಲಾಗಿತ್ತು. ಈ ಕುರಿತು ಪರಿಶೀಲನೆ ನಡೆಸಿದ್ದ ಸಚಿವ ವಿ. ಸುನೀಲ್ ಕುಮಾರ್ ಅನುದಾನವನ್ನು ಯೋಗ್ಯರಿಗೆ ಪಾರದರ್ಶಕವಾಗಿ ಹಂಚಿಕೆ ಮಾಡುವಂತೆ ಸೂಚಿಸಿದ್ದರು.


ಕೃಪೆ: ‘ದಿ ಫೈಲ್‌’

© Copyright 2022, All Rights Reserved Kannada One News