ಮೂರನೇ ಬಾರಿಗೆ ರೆಪೊ ದರ ಹೆಚ್ಚಿಸಿದ ಆರ್‌ಬಿಐ: ಬಡ್ಡಿ ದರ ಇನ್ನಷ್ಟು ಹೆಚ್ಚಳ

ಮೂರನೇ ಬಾರಿಗೆ ರೆಪೊ ದರ ಹೆಚ್ಚಿಸಿದ ಆರ್‌ಬಿಐ: ಬಡ್ಡಿ ದರ ಇನ್ನಷ್ಟು ಹೆಚ್ಚಳ

Updated : 05.08.2022

ಮುಂಬೈ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ರೆಪೊ ದರವನ್ನು ಶೇಕಡ 0.50ರಷ್ಟು ಹೆಚ್ಚಿಸಿದೆ. ಇದರೊಂದಿಗೆ ರೆಪೊ ದರ ಈಗ ಶೇ 5.4 ಆಗಿದೆ.

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ಶುಕ್ರವಾರ ಹಣಕಾಸು ನೀತಿ ಪ್ರಕಟಿಸಿ ರೆಪೊ ದರ ಹೆಚ್ಚಳ ಮಾಡಿರುವುದನ್ನು ಘೋಷಿಸಿದರು. ರೆಪೊ ದರ ಹೆಚ್ಚಳ ತಕ್ಷಣದಿಂದಲೇ ಜಾರಿಗೆ ಬರಲಿದೆ ಎಂದು ಅವರು ತಿಳಿಸಿದ್ದಾರೆ.

ರೆಪೊ ದರ ಹೆಚ್ಚಳ ನಿರ್ಧಾರಕ್ಕೆ ಶಕ್ತಿಕಾಂತ ದಾಸ್ ಸೇತೃತ್ವದ ಆರು ಮಂದಿ ಸದಸ್ಯರ ಹಣಕಾಸು ನೀತಿ ಸಮಿತಿಯು (ಎಂಪಿಸಿ) ಸರ್ವಾನುಮತದಿಂದ ಅನುಮೋದನೆ ನೀಡಿತು.

ಹೆಚ್ಚಲಿದೆ ಸಾಲದ ಮೇಲಿನ ಬಡ್ಡಿ ದರ: ದೇಶದ ವಾಣಿಜ್ಯ ಬ್ಯಾಂಕ್‌ಗಳು ಆರ್‌ಬಿಐಯಿಂದ ಪಡೆಯುವ ಸಾಲದ ಬಡ್ಡಿ ದರವೇ ರೆಪೊ ದರ. ಹೀಗಾಗಿ, ಆರ್‌ಬಿಐ ರೆಪೊ ದರ ಹೆಚ್ಚಿಸಿರುವುದರಿಂದ ಬ್ಯಾಂಕುಗಳು ಸಹ ಬಡ್ಡಿ ದರದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಗೃಹ, ವಾಹನ ಹಾಗೂ ಇತರ ಸಾಲಗಳ ಬಡ್ಡಿ ದರ ಇನ್ನಷ್ಟು ಜಾಸ್ತಿ ಆಗಲಿದೆ.

ಈ ಹಿಂದೆ ಮೇ ಮತ್ತು ಜೂನ್‌ ತಿಂಗಳಲ್ಲಿ ರೆ‍ಪೊ ದರ ಹೆಚ್ಚಿಸಿದ್ದಾಗ ಹಲವು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಹಾಗೂ ಗೃಹ ಹಣಕಾಸು ಸಂಸ್ಥೆಗಳು ಬಡ್ಡಿ ದರ ಹೆಚ್ಚಳ ಮಾಡಿದ್ದವು. ಐಸಿಐಸಿಐ ಬ್ಯಾಂಕ್‌ ಮತ್ತು ಬ್ಯಾಂಕ್‌ ಆಫ್‌ ಬರೋಡಾ ಮೇ 5ರಂದು ಸಾಲದ ಮೇಲಿನ ಬಡ್ಡಿದರ ಏರಿಕೆ ಮಾಡಿದ್ದವು. ಐಸಿಐಸಿಐ ಬ್ಯಾಂಕ್‌ ಎಕ್ಸ್‌ಟರ್ನಲ್‌ ಬೆಂಚ್‌ಮಾರ್ಕ್‌ ಲೆಂಡಿಂಗ್ ರೇಟ್‌ (ಇಬಿಎಲ್‌ಆರ್‌) ಅನ್ನು ಶೇ 8.10ಕ್ಕೆ ಹೆಚ್ಚಿಸಿದ್ದರೆ, ಬ್ಯಾಂಕ್‌ ಆಫ್‌ ಬರೋಡಾ ಸಾಲದ ಮೇಲಿನ ಬಡ್ಡಿದರವನ್ನು ಅನ್ನು ಶೇ 6.90ಕ್ಕೆ ಏರಿಕೆ ಮಾಡಿತ್ತು. ಎಚ್‌ಡಿಎಫ್‌ಸಿ ಬ್ಯಾಂಕ್ ಸಾಲದ ಮೇಲಿನ ಬಡ್ಡಿದರವನ್ನು ಜೂನ್ 7ರಂದು ಶೇ 0.35ರಷ್ಟು ಹೆಚ್ಚಳ ಮಾಡಿತ್ತು.

© Copyright 2022, All Rights Reserved Kannada One News