ಅಳುವ ಸೊಂಡೂರಿನ ಬೆಟ್ಟಗಳು!: ಬಿ.ಶ್ರೀನಿವಾಸ ಅವರ ವಾರದ ಅಂಕಣ

ಅಳುವ ಸೊಂಡೂರಿನ ಬೆಟ್ಟಗಳು!: ಬಿ.ಶ್ರೀನಿವಾಸ ಅವರ ವಾರದ ಅಂಕಣ

Updated : 21.07.2022

ಗಣಿಧಣಿಗಳು ತಿರುಪತಿ ತಿಮ್ಮಪ್ಪನಿಗೆ ಹಾಕಿದ ನಲವತ್ತೈದು ಕೋಟಿ ರೂಪಾಯಿಯ ಟೋಪಿಯಲ್ಲಿ,ಗಣಿಧಣಿಗಳ ಹೊಸಹೊಸ ಕಾರುಗಳಲ್ಲಿ,ಕೋಟೆಗಳಂತಹ ಬಂಗಲೆಗಳಲ್ಲಿ,ರೆಸಾರ್ಟುಗಳಲ್ಲಿ ತಮ್ಮದೇ ದೇಹದ ತುಂಡುಗಳಿರುವುದನ್ನು ನಾವು ಬಲ್ಲೆವು ಎಂಬಂತೆ ಬೆಟ್ಟಗಳು ಮೌನಕ್ಕೆ ಶರಣಾಗಿಬಿಟ್ಟಿವೆ.

ಉಡಿಯೊಳಗೆ ಕಟ್ಟಿಕೊಂಡು ಬಂದು ತಿನಿಸು ತಿನಿಸಿ ಬೆಳೆಸಿದ ಅದೇ ಮಗ ,ವಯಸ್ಸಾದ ತಾಯಿಯ ದೇಹದ ತುಂಡುಗಳನ್ನು ಹೊತ್ತೊಯ್ಯುವುದನ್ನು ಅಸಹಾಯಕಳಾಗಿ ನೋಡುತ್ತಾ ಕುಳಿತ  ಹಾಗೆ,ಗಾಯಗೊಂಡ ಬೆಟ್ಟಗಳು ರೋದಿಸುತ್ತಿವೆ.ತನ್ನ ಕಾಲಡಿಯಲ್ಲಿಯೇ ಬಿದ್ದ ತುಂಡು ತುಂಡಾದ ಜಾತ್ರೆಗಳು,ಮನೆಗಳಿಂದ ಕೇಳಿಬರುವ ಆಕ್ರಂದನಗಳಿಗಿಂತಲೂ ತೆರೆದ ಬಾಗಿಲಿನ ದೀಪವಾರಿದ ಮನೆಗಳ ಮೌನ ,ಆ ಬೆಟ್ಟಗಳನ್ನು ಕಾಡುವಂತಿದೆ.
ಲೋಕಾಯುಕ್ತರ ವರದಿ ಜನರ ಪಾಲಿಗೆ ವರದಾನವಾಗಬೇಕಿತ್ತು.ಸುಪ್ರೀಮ್ ಕೋರ್ಟಿನ ಹಸಿರು ಪೀಠದ ತೀರ್ಪು, ಜನರ ಮೊಗದಲ್ಲಿ ಕಿರುನಗೆಯನ್ನಾದರೂ ಮೂಡಿಸಲು ಸಾಧ್ಯವಿದೆ.
ಆದರೆ ಏನು ಮಾಡುವುದು?
ಜನರ ಸಾವುಗಳಿಗೆ,ನೋವುಗಳಿಗೆ ಕಾರಣನಾದೆನಲ್ಲ ಎಂಬ ಪಾಪಪ್ರಜ್ಞೆಯಲ್ಲಿರುವ ಗಾಯಗೊಂಡ ಈ ಬೆಟ್ಟಗಳಿಗೆ ಮಾತು ಬರುವುದಿಲ್ಲ.ಪೋಷಿಸಿ,ಸಲಹಿ ಗೊತ್ತೇ ವಿನಃ ಆಹುತಿ ತೆಗೆದುಕೊಳ್ಳುವ ಜಾಯಮಾನದವಲ್ಲ.
ಹಾಗಾಗಿ ಅಳುತ್ತವೆ...
ಮತ್ತೆ
ಅಳುತ್ತವೆ.
ತನ್ನ ಮಾತಿಗೆ ಕೇರೇ ಮಾಡದ  ಹಳ್ಳಿಯನ್ನು ಕಂಡು ದುಃಖಿತನಾದ ಅಜ್ಜನೊಬ್ಬ  ರಾತ್ರಿ....ಸಿಂಗಲ್ ಫೀಜಿನ ಆ ಲೈಟು ಕಂಬದ ಕೆಳಗೆ  
ಮೌನವಾಗಿ ಎದ್ದು ಕುಂತು ಒಬ್ಬನೇ ಅಳುವ  ಹಾಗೆ!
"ಯಜ್ಜೋ....ನೀನೇಕೆ ಅಳುತ್ತಿರುವೆ?"ಎಂದು
ಕೇಳುವವರಾರೂ ಇಲ್ಲ.

      -ಬಿ.ಶ್ರೀನಿವಾಸ

© Copyright 2022, All Rights Reserved Kannada One News