'ಸಂಗಂ' ವಿಶ್ವ ಕವಿ ಸಮ್ಮೇಳನದಲ್ಲಿ ‘ಸರ್ವಾಧಿಕಾರಿ ಪ್ರೀತಿಸಬೇಕಿತ್ತು‘ ಕವಿತೆ ವಿವಾದ: 'ಮೋದಿ ಜಿಂದಾಬಾದ್' ಘೋಷಣೆ

'ಸಂಗಂ' ವಿಶ್ವ ಕವಿ ಸಮ್ಮೇಳನದಲ್ಲಿ ‘ಸರ್ವಾಧಿಕಾರಿ ಪ್ರೀತಿಸಬೇಕಿತ್ತು‘ ಕವಿತೆ ವಿವಾದ: 'ಮೋದಿ ಜಿಂದಾಬಾದ್' ಘೋಷಣೆ

Updated : 21.10.2022

ಬಳ್ಳಾರಿ: ಇಲ್ಲಿ ಶುಕ್ರವಾರ ಆರಂಭಗೊಂಡ 'ಸಂಗಂ' ವಿಶ್ವ ಕವಿ ಸಮ್ಮೇಳನದಲ್ಲಿ 'ಮೋದಿ ಜಿಂದಾಬಾದ್' ಘೋಷಣೆ ಮೊಳಗಿತು.

ಸಮ್ಮೇಳನದ ಅಂಗವಾಗಿ ಏರ್ಪಡಿಸಿದ್ದ ಎರಡನೇ ಗೋಷ್ಠಿಯಲ್ಲಿ ದಕ್ಷಿಣ ಕನ್ನಡದ ವಿಲ್ಸನ್ ಕಟೀಲ್ ಅವರು ‘ಸರ್ವಾಧಿಕಾರಿ ಪ್ರೀತಿಸಬೇಕಿತ್ತು‘ ಎಂಬ ಕವಿತೆಯ ವಾಚನ ಮುಗಿಯುವ ಮೊದಲೇ ಕೆಲವರು ಎದ್ದು ನಿಂತು ಸರ್ವಾಧಿಕಾರಿ ಯಾರು ಎಂದ್ಹೇಳಿ ಎಂದು ಹಟ ಹಿಡಿದರು..  ಇಡೀ ಸಭಾಂಗಣದಲ್ಲಿ ಕೆಲವು ಕಾಲ ಗೊಂದಲದ ವಾತಾವರಣ ಹುಟ್ಟುಹಾಕಿತು ಎಂದು ಪ್ರಜಾವಾಣಿ ವರದಿ ಮಾಡಿದೆ.

ಸಭಿಕರ ಸಾಲಿನಲ್ಲಿ ಕುಳಿತಿದ್ದ ಗಂಗಾವತಿಯ ರಾಮನಾಥ್ ಭಂಡಾರಕರ್ ಎಂಬುವವರು ಸರ್ವಾಧಿಕಾರಿ ಅಂತ ಮಾತ್ರ ಯಾಕೆ ಕವಿತೆ ಓದ್ತೀರಿ? ಯಾರು ಎಂದು ಹೇಳಿ ಎಂದು ಹಟ ಹಿಡಿದು, ಗಲಾಟೆ ಆರಂಭಿಸಿದಾಗ, ಮುಂದಿನ ಸಾಲಿನಲ್ಲಿದ್ದ ವಿವಿಧ ದೇಶದ ಕವಿಗಳು 'ಪೋಯೆಟ್ರಿ ಜಿಂದಾಬಾದ್‌' ಎಂದು ಜಯಕಾರ ಹಾಕಲಾರಂಭಿಸಿದರು. ಇದಕ್ಕೆ ಪ್ರತಿಯಾಗಿ ರಾಮನಾಥ್‌ ಅವರ ತಂಡ ಇದ್ದಕ್ಕಿದ್ದಂತೆ 'ಮೋದಿ ಜಿಂದಾಬಾದ್‌' ಎಂಬ ಜಯಕಾರವನ್ನೂ ಹಾಕಿದರು.

ಈ ನಡುವೆ ವಿಲ್ಸನ್‌ ಕಟೀಲ್‌ ಕವಿತೆಯ ಅಭಿಮಾನಿಗಳು, ಆ ಕವಿತೆಯನ್ನು ಇನ್ನೊಮ್ಮೆ, ಮತ್ತೊಮ್ಮೆ ಓದಿ, ನಿಧಾನವಾಗಿ ಓದಿ ಎಂದೂ ಬೇಡಿಕೆ ಇತ್ತರು.

ಡಾ.ಶ್ರೀನಿವಾಸ್‌ ಮೂರ್ತಿ, ಬೆಂಗಳೂರು ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥರು, "ಎಲ್ಲವನ್ನೂ ವಾಚ್ಯವಾಗಿ ಹೇಳುವುದಾದರೆ ಅದು ಕವಿತೆಯಾಗದು ಎಂದೂ ಹೇಳಿದರು. ಆಯೋಜಕರು ಗಲಾಟೆ ಮಾಡಿದವರ ತಂಡವನ್ನು ಸುಮ್ಮನಾಗಲು ಹೇಳಿದಾಗ, ಅವರೆಲ್ಲ ಕವಿಗೋಷ್ಠಿಯನ್ನು ಬಹಿಷ್ಕರಿಸಿ ಆಚೆಹೋದರು. ಗೋಷ್ಠಿ ಮತ್ತೆ ಮುಂದುವರಿಯಿತು ಎಂದು ಪ್ರಜಾವಾಣಿ ವರದಿ ಮಾಡಿದೆ.

© Copyright 2022, All Rights Reserved Kannada One News