ಮೈಸೂರು: ದಸರಾ ಕವಿಗೋಷ್ಠಿಗೆ ಮೃತಪಟ್ಟ ಕವಿಯ ಹೆಸರು!

ಮೈಸೂರು: ದಸರಾ ಕವಿಗೋಷ್ಠಿಗೆ ಮೃತಪಟ್ಟ ಕವಿಯ ಹೆಸರು!

Updated : 27.09.2022

ಮೈಸೂರು: ಕೆಲ ದಿನಗಳ ಹಿಂದೆ ನಾಡಿನ ನಾನಾ ಟ್ರಸ್ಟ್ ಗಳಿಗೆ ನೇಮಕ ಮಾಡುವಾಗ ಕಳೆದ ವರ್ಷ ಮೃತಪಟ್ಟಿದ್ದ ರಾಜೇಶ್ವರಿ ತೇಜಸ್ವಿ ಅವರನ್ನೂ ನೇಮಿಸಿ ಎಡವಟ್ಟು ಮಾಡಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ದಸರಾ ಮುಖ್ಯ ಕವಿಗೋಷ್ಠಿಗೆ ಮೃತಪಟ್ಟ ಕವಿಯೊಬ್ಬರ ಹೆಸರನ್ನು ಸೆರಿಸಿ ಮತ್ತೊಂದು ಮಹಾ ಎಡವಟ್ಟು ಮಾಡಿದೆ. ಆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ತೀವ್ರ ಟ್ರೋಲ್ ಗೆ ಒಳಗಾಗಿದೆ.

ದಸರಾ ಪ್ರಯುಕ್ತ ಅಕ್ಟೋಬರ್ 3ರಂದು ಮೈಸೂರು ವಿವಿಯ ಸೆನೆಟ್ ಸಭಾಂಗಣದಲ್ಲಿ ಪ್ರಧಾನ ಕವಿಗೋಷ್ಠಿ ಆಯೋಜಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ಭಾಗವಹಿಸುವ 37 ಕವಿಗಳಲ್ಲಿ ಮೂರು ವರ್ಷಗಳ ಹಿಂದೆಯೇ ಮೃತಪಟ್ಟ ಹಿರಿಯ ಕವಿ, ಆಕಾಶವಾಣಿ ಕಾರ್ಯಕ್ರಮ ನಿರ್ವಾಹಕರಾಗಿದ್ದ ಜಿ.ಕೆ.ರವೀಂದ್ರ ಕುಮಾರ್ ಅವರ ಹೆಸರು ಕೂಡಾ ಇದೆ! ಇದು ಆಹ್ವಾನ ಪತ್ರಿಕೆಯಲ್ಲೂ ಮುದ್ರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಸಾಕಷ್ಟು ಟೀಕೆಗೆ ಗುರಿಯಾಗಿದೆ.