ನಕಲಿ ಟ್ವಿಟರ್ ಖಾತೆಗಳ ಹಾವಳಿ: ಬ್ಲೂಟಿಕ್ ಚಂದಾದಾರಿಕೆ ಸೇವೆ ಸ್ಥಗಿತ

ನಕಲಿ ಟ್ವಿಟರ್ ಖಾತೆಗಳ ಹಾವಳಿ: ಬ್ಲೂಟಿಕ್ ಚಂದಾದಾರಿಕೆ ಸೇವೆ ಸ್ಥಗಿತ

Updated : 12.11.2022

ನಕಲಿ ಖಾತೆಗಳ ಹಾವಳಿ ಹಿನ್ನೆಲೆಯಲ್ಲಿ ಬ್ಲ್ಯೂಟಿಕ್ ಇರುವ ಖಾತೆಗಳಿಗೆ ಶುಲ್ಕ ವಿಧಿಸುವ ಚಂದಾದಾರಿಕೆ ಸೇವೆಯನ್ನು ಟ್ವಿಟರ್ ಸ್ಥಗಿತಗೊಳಿಸಿದೆ.

ಪ್ರಮುಖ ಬ್ರ್ಯಾಂಡ್‌ಗಳ ಮತ್ತು ಖ್ಯಾತನಾಮರ ಹೆಸರಿನಲ್ಲಿ ಇತರರು ತೆರೆಯುವ ನಕಲಿ ಖಾತೆಗಳನ್ನು ಹತ್ತಿಕ್ಕುವ ಸಲುವಾಗಿ ದೃಢೀಕೃತ ಖಾತೆ- ಅಂದರೆ ಬ್ಲೂಟಿಕ್‌ ಹೊಂದಿರುವ ಖಾತೆಗೆ $8 ಚಂದಾದಾರಿಕೆ ಯೋಜನೆಯನ್ನು ಇತ್ತೀಚೆಗಷ್ಟೇ ಆರಂಭಿಸಿದ್ದ ಟ್ವಿಟರ್, ನಕಲಿ ಖಾತೆಗಳ ಹಾವಳಿ ತಡೆಯಲು ಸಾಧ್ಯವಾಗದೆ ಇದೀಗ ಸ್ಥಗಿತಗೊಳಿಸಿದೆ.

ಹಾಲಿ ಚಂದಾದಾರಿಕೆ ಪಡೆದವರು ತಮ್ಮ ಬ್ಲೂಟಿಕ್‌ ಖಾತೆಗೆ ಈಗಲೂ ಪ್ರವೇಶ ಹೊಂದಿರುತ್ತಾರೆ ಎಂದು ಟ್ಟಿಟರ್‌ ಹೇಳಿದೆ. 

ಟ್ವಿಟರ್‌ ತನ್ನಲ್ಲಿರುವ ಹೈ ಪ್ರೊಫೈಲ್‌ ಖಾತೆಗಳಿಗೆ 'ಅಧಿಕೃತ' ಬ್ಯಾಡ್ಚುಗಳನ್ನು ಮರುಸ್ಥಾಪಿಸಿದೆ. ಇದರಿಂದ ಪ್ರಮುಖ ಮಾಧ್ಯಮ ಸಂಸ್ಥೆಗಳು ಮತ್ತು ಉದ್ಯಮಗಳ ಖಾತೆಗಳಲ್ಲಿ ಪ್ರೊಫೈಲ್‌ಗಳ ಕೆಳಗೆ ಬೂದು ಬಣ್ಣದ ಬ್ಯಾಡ್ಜ್‌ಗಳು ಮತ್ತೆ ಕಾಣಿಸಿಕೊಂಡಿವೆ.

ದೃಢೀಕೃತ ಬ್ಲೂಟಿಕ್‌ ಮಾರ್ಕ್‌ಗಳನ್ನು ಪಡೆಯಲು $8 ಚಂದಾದಾರಿಕೆಯನ್ನು ಟ್ವಿಟರ್‌ ಘೋಷಿಸಿದ ಬೆನ್ನಲ್ಲೇ ನಕಲಿ ಖಾತೆಗಳ ಮಹಾಪೂರವನ್ನು ನಿಭಾಯಿಸುವುದು ಟ್ವಿಟರ್‌ಗೆ ಸವಾಲಾಗಿದೆ.

ಟ್ವಿಟರ್‌ನಲ್ಲಿ ವೆರಿಫೈಡ್ ಖಾತೆಗಳಿಗೆ ಮಾಸಿಕ ಎಂಟು ಡಾಲರ್ ಶುಲ್ಕ ವಿಧಿಸುವ ಟ್ವಿಟರ್ ಬ್ಲೂ ಚಂದಾದಾರಿಕೆ ಸೇವೆ ಪ್ರಾರಂಭಿಸಲಾಗಿತ್ತು. ಟ್ವಿಟರ್ ಈ ಸೇವೆಯನ್ನು ಮೊದಲು ಐಫೋನ್‌ನ ಐಒಎಸ್ ಬಳಕೆದಾರರಿಗೆ ಒದಗಿಸಿತ್ತು. ಈಗ ಅವರಿಗೂ  ಚಂದಾದಾರಿಕೆ ಸೇವೆ ಲಭ್ಯವಾಗುತ್ತಿಲ್ಲ ಎಂದು ತಿಳಿದು ಬಂದಿದೆ.

ನಕಲಿ ಖಾತೆ ಕಾಣಿಸಿಕೊಂಡಿರುವುದೇ ಟ್ವಿಟರ್‌ ತನ್ನ ಫ್ಲ್ಯಾಟ್‌ಫಾರ್ಮ್‌ನಿಂದ ಬ್ಲೂಟಿಕ್ ಮಾರ್ಕ್ ತೆಗೆದು ಹಾಕಲು ಕಾರಣ ಎನ್ನಲಾಗಿದೆ. ಎಲಾನ್ ಮಸ್ಕ್ ಅವರ ಟೆಸ್ಲಾ, ಸ್ಪೇಸ್ ಎಕ್ಸ್ ಸೇರಿದಂತೆ ಹಲವು ಪ್ರಸಿದ್ಧ ಖಾತೆಗಳ ನಕಲಿ ಖಾತೆಗಳು ಸೃಷ್ಟಿಯಾಗಿದ್ದವು.

© Copyright 2022, All Rights Reserved Kannada One News