ಕನಿಷ್ಠ ಮಾಹಿತಿಯನ್ನು ಹೊರತುಪಡಿಸಿ ಸಾಲಗಾರರ ದತ್ತಾಂಶವನ್ನು ಸಂಗ್ರಹಿಸುವಂತಿಲ್ಲ: ಆರ್‌ ಬಿ ಐ ಸೂಚನೆ

ಕನಿಷ್ಠ ಮಾಹಿತಿಯನ್ನು ಹೊರತುಪಡಿಸಿ ಸಾಲಗಾರರ ದತ್ತಾಂಶವನ್ನು ಸಂಗ್ರಹಿಸುವಂತಿಲ್ಲ: ಆರ್‌ ಬಿ ಐ ಸೂಚನೆ

Updated : 04.09.2022

ಹೊಸದಿಲ್ಲಿ: ಡಿಜಿಟಲ್ ಸಾಲ ನೀಡುವ ಆ್ಯಪ್‌ಗಳನ್ನು ಬಳಸುವ ಸಾಲಗಾರರು ದುರ್ಬಳಕೆಯಾಗುವುದನ್ನು ತಡೆಯಲು ಭಾರತದ ರಿಸರ್ವ್ ಬ್ಯಾಂಕ್ ಬ್ಯಾಂಕ್‌ಗಳು ಸೇರಿದಂತೆ ಎಲ್ಲ ಸಾಲಿಗೆ ಸಂಸ್ಥೆಗಳಿಗೆ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿದೆ. 

ಭಾರತದ ರಿಸರ್ವ್ ಬ್ಯಾಂಕ್ ಹೊರಡಿಸಿದ ಮಾರ್ಗಸೂಚಿ ಪ್ರಕಾರ ಶಾಸನಬದ್ಧ ಸಂಸ್ಥೆಗಳು ಕೆಲವು ಮೂಲಭೂತ ಕನಿಷ್ಠ ಮಾಹಿತಿಯನ್ನು ಹೊರತುಪಡಿಸಿ ಸಾಲಗಾರರ ದತ್ತಾಂಶವನ್ನು ಸಂಗ್ರಹಿಸುವಂತಿಲ್ಲ.

ಮಾರ್ಗಸೂಚಿಯ ಪ್ರಕಾರ ಸಾಲಿಗರು ಗ್ರಾಹಕರ ಹೆಸರು, ವಿಳಾಸ, ಸಂಪರ್ಕ ವಿವರಗಳಂತಹ ಮಾಹಿತಿಗಳನ್ನು ಮಾತ್ರ ಸಂಗ್ರಹಿಸಬಹುದು. ಇದು ಸಾಲ ಪ್ರಕ್ರಿಯೆ ಹಾಗೂ ವಿತರಣೆಗೆ, ಪಾವತಿಗೆ ಅಗತ್ಯ. ಸಾಲಗಾರನ ಬಯೋಮೆಟ್ರಿಕ್ ಮಾಹಿತಿಯನ್ನು ಡಿಜಿಟಲ್ ಸಾಲಗಾರ ಆ್ಯಪ್‌ಗಳು ಸಂಗ್ರಹಿಸುವಂತಿಲ್ಲ. ಹೊಸ ಸಾಲ ಪಡೆಯುತ್ತಿರುವ ಈಗಿನ ಗ್ರಾಹಕರು ಹಾಗೂ ಹೊಸ ಗ್ರಾಹಕರಿಗೆ ಈ ಸುತ್ತೋಲೆ (೨ ಸೆಪ್ಟಂಬರ್ ೨೦೨೨) ದಿನಾಂಕದಿಂದ ಮಾರ್ಗಸೂಚಿಗಳು ಅನ್ವಯವಾಗಲಿದೆ. ಆದರೂ ಸುಗಮ ವ್ಯವಹಾರಕ್ಕಾಗಿ ಶಾಸನಬದ್ಧ ಸಂಸ್ಥೆಗಳಿಗೆ ೨೦೨೨ ನವೆಂಬರ್ ೩೦ರ ವರೆಗೆ ಕಾಲಾವಕಾಶ ನೀಡಲಾಗಿದೆ.

ಆರ್‌ಬಿಐ ಜಾರಿಗೊಳಿಸಿದ ಮಾರ್ಗಸೂಚಿಗಳು ಆಲ್ ಕಮರ್ಶಿಯಲ್ ಬ್ಯಾಂಕ್‌ಗಳು, ಪ್ರೈಮರಿ (ಗ್ರಾಮೀಣ)ಕೋ-ಆಪರೇಟಿವ್ ಬ್ಯಾಂಕ್‌ಗಳು, ಸ್ಟೇಟ್ ಕೋ-ಆಪರೇಟಿವ್ ಬ್ಯಾಂಕ್‌ಗಳು, ಡಿಸ್ಟ್ರಿಕ್ಟ್ ಸೆಂಟ್ರಲ್ ಕೋ-ಆಪರೇಟಿವ್ ಬ್ಯಾಂಕ್‌ಗಳು ಹಾಗೂ ಬ್ಯಾಂಕಿಂಗೇತರ ಹಣಕಾಸು ಕಂಪೆನಿಗಳು (ಹೌಸಿಂಗ್ ಫಿನಾನ್ಸ್ ಕಂಪೆನಿಗಳು)ನ್ನು ಒಳಗೊಳ್ಳಲಿದೆ.

© Copyright 2022, All Rights Reserved Kannada One News